ಧರ್ಮಶಾಲಾದಲ್ಲಿ ಭಾರತ ತಂಡವನ್ನು ಸೇರ್ಪಡೆಗೊಂಡ ಶಮಿ

Update: 2017-03-22 09:42 GMT

ಹೊಸದಿಲ್ಲಿ, ಮಾ.22: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿರುವ ಧರ್ಮಶಾಲಾಕ್ಕೆ ಬುಧವಾರ ತೆರಳಿದ್ದು, ಆಸ್ಟ್ರೇಲಿಯ ವಿರುದ್ಧ ಸರಣಿಯ ಕೊನೆಯ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆಯಿದೆ.

ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತಂತೆ ಮಂಗಳವಾರ ಊಹಾಪೋಹ ಕೇಳಿಬಂದಿದ್ದು, ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಬಳಿ ವಿಚಾರಿಸಿದಾಗ ಅವರು ನೇರ ಉತ್ತರ ನೀಡಿಲ್ಲ.

ಭಾರತ ತಂಡ ಸರಣಿ ನಿರ್ಣಾಯಕ ಪಂದ್ಯವನ್ನು ಆಡಲು ಧರ್ಮಶಾಲಾಕ್ಕೆ ಆಗಮಿಸಿದ ಮರುದಿನವೇ ಶಮಿ ತಂಡವನ್ನು ಸೇರಿಕೊಂಡಿದ್ದಾರೆ. ಫಿಟ್‌ನೆಸ್ ಪಡೆದಿರುವ ಶಮಿ ಪ್ರಾಕ್ಟೀಸ್ ನಡೆಸಿರುವ ಸ್ಥಳದ ಸುಂದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

  ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ 3ನೆ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಬಳಿಕ ಶಮಿ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ಗುಜರಾತ್ ವಿರುದ್ಧ ವಿಜಯ್ ಹಝಾರೆ ಟೂರ್ನಿಯನ್ನು ಆಡುವುದರೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದರು. ವಿಜಯ್ ಹಝಾರೆ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಆಡಿದ್ದರು.ಆ ಪಂದ್ಯದಲ್ಲಿ 26 ರನ್‌ಗೆ 4 ವಿಕೆಟ್‌ಗಳನ್ನು ಪಡೆದಿದ್ದರು.

26ರ ಹರೆಯದ ಶಮಿ 2013ರಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ ಭಾರತದ ಪರ 22 ಟೆಸ್ಟ್ ಪಂದ್ಯಗಳನ್ನಾಡಿದ್ದು, 76 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News