ಕಾಂಬೋಡಿಯ ವಿರುದ್ಧ ಭಾರತಕ್ಕೆ ರೋಚಕ ಗೆಲುವು: 11 ವರ್ಷಗಳ ಬಳಿಕ ವಿದೇಶದಲ್ಲಿ ಒಲಿದ ಜಯ

Update: 2017-03-22 18:21 GMT

 ಕಾಂಬೋಡಿಯ, ಮಾ.22: ಫಿಫಾ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಕಾಂಬೋಡಿಯ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ 11 ವರ್ಷಗಳ ಬಳಿಕ ವಿದೇಶದಲ್ಲಿ ಗೆಲುವು ದಾಖಲಿಸಿದೆ. 2006ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಸಾಧಿಸಿತ್ತು.

ಇಲ್ಲಿನ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ(36ನೆ ನಿಮಿಷ) ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 37ನೆ ನಿಮಿಷದಲ್ಲಿ ಗೋಲು ಬಾರಿಸಿದ ಖುವೊನ್ ಲಬರಾವಿ ಕಾಂಬೋಡಿಯ ತಂಡ ಮೊದಲಾರ್ಧದಲ್ಲಿ 1-1 ರಿಂದ ಸಮಬಲ ಸಾಧಿಸಲು ನೆರವಾದರು.

ಬದಲಿ ಆಟಗಾರರಾದ ಜೇಜೆ ಲಾಲ್‌ಪೆಕುಲ್ವಾ(50ನೆ ನಿಮಿಷ) ಹಾಗೂ ಸಂದೇಶ್ ಜಿಂಘಾನ್(54ನೆ ನಿಮಿಷ) ದ್ವಿತೀಯಾರ್ಧದಲ್ಲಿ ಕ್ಷಿಪ್ರವಾಗಿ ಗೋಲು ಬಾರಿಸಿ ಭಾರತಕ್ಕೆ 3-1 ಮುನ್ನಡೆ ಒದಗಿಸಿಕೊಟ್ಟರು.

62ನೆ ನಿಮಿಷದಲ್ಲಿ ಗೋಲು ಬಾರಿಸಿದ ಚಾನ್ ವತನಕ ಕಾಂಬೋಡಿಯ ಕೊನೆಯ ಕ್ಷಣದಲ್ಲಿ ತಿರುಗೇಟು ನೀಡಲು ಕಾರಣರಾದರು. ಭಾರತಕ್ಕೆ ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಆಟಗಾರ ಚೆಟ್ರಿ ಆರಂಭದಲ್ಲೇ ಮೇಲುಗೈ ಒದಗಿಸಿಕೊಟ್ಟರು. ಆದರೆ, ಭಾರತದ ಮುನ್ನಡೆಯ ಸಂಭ್ರಮ ಹೆಚ್ಚುಹೊತ್ತು ಇರಲಿಲ್ಲ. 173ನೆ ರ್ಯಾಂಕಿನಲ್ಲಿರುವ ಕಾಂಬೋಡಿಯ 132ನೆ ರ್ಯಾಂಕಿನ ಭಾರತದ ವಿರುದ್ಧ 37ನೆ ನಿಮಿಷದಲ್ಲಿ1-1 ರಿಂದ ಸಮಬಲ ಸಾಧಿಸಲು ಯಶಸ್ವಿಯಾಯಿತು.

 ದ್ವಿತೀರ್ಯಾದದಲ್ಲಿ ಭಾರತ ಎರಡು ಗೋಲುಗಳನ್ನು ಬಾರಿಸಲು ಸಮರ್ಥವಾಯಿತು. ಮೋಹನ್ ಬಗಾನ್ ಸ್ಟ್ರೈಕರ್ ಲಾಲ್‌ಪೆಕುಲ್ವಾ 50ನೆ ನಿಮಿಷದಲ್ಲಿ ಭಾರತದ ಪರ 2ನೆ ಗೋಲು ಬಾರಿಸಿದರು. ಒಂದು ನಿಮಿಷದ ಬಳಿಕ ರಾಬಿನ್ ಸಿಂಗ್ ಭಾರತಕ್ಕೆ 3-1 ಮುನ್ನಡೆ ಒದಗಿಸುವ ಅವಕಾಶವನ್ನು ಕೈಚೆಲ್ಲಿದರು. 54ನೆ ನಿಮಿಷದಲ್ಲಿ ಗೋಲು ಬಾರಿಸಿದ ಸಂದೇಶ್ ಭಾರತದ ಮುನ್ನಡೆಯನ್ನು 3-1ಕ್ಕೆ ಏರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News