ಅಫ್ಘಾನಿಸ್ತಾನಕ್ಕೆ ಸೋಲುಣಿಸಿದ ಐರ್ಲೆಂಡ್: ಏಕದಿನ ಸರಣಿ ಸಮಬಲ

Update: 2017-03-22 18:23 GMT

 ಗ್ರೇಟರ್ ನೊಯ್ಡ, ಮಾ.22: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೆವಿನ್ ಒ’ಬ್ರಿಯಾನ್ ಆಕರ್ಷಕ ಅರ್ಧಶತಕದ(ಅಜೇಯ 72, 60 ಎಸೆತ)ಸಹಾಯದಿಂದ ಐರ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧದ ನಾಲ್ಕನೆ ಏಕದಿನ ಪಂದ್ಯವನ್ನು 3 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿತು.

ಇಲ್ಲಿನ ಗ್ರೇಟರ್ ನೊಯ್ಡ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡ 49.5 ಓವರ್‌ಗಳಲ್ಲಿ 220 ರನ್ ಗಳಿಸಿ ಆಲೌಟಾಯಿತು. ಗೆಲ್ಲಲು 221 ರನ್ ಗುರಿ ಪಡೆದ ಐರ್ಲೆಂಡ್ ತಂಡ ಅಫ್ಘಾನ್ ಆಲ್‌ರೌಂಡರ್ ಮುಹಮ್ಮದ್ ನಬಿ(4-30) ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 130 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆಗ ವಿಲ್ಸನ್ ಅವರೊಂದಿಗೆ(41 ರನ್, 67 ಎಸೆತ, 3 ಬೌಂಡರಿ)7ನೆ ವಿಕೆಟ್‌ಗೆ 66 ರನ್ ಜೊತೆಯಾಟ ನಡೆಸಿದ ಓ’ಬ್ರಿಯಾನ್ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಿದರು. ಒ’ಬ್ರಿಯಾನ್ಗೆ ಸಮರ್ಥ ಸಾಥ್ ನೀಡಿದ ವಿಲ್ಸನ್ ತಂಡದ ಗೆಲುವಿಗೆ 28 ರನ್ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ಡಾಕ್ರೆಲ್(ಅಜೇಯ 5) ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 28 ರನ್ ಸೇರಿಸಿದ ಓ’ಬ್ರಿಯಾನ್ ಇನ್ನೂ 19 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದರು. 60 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ ಅಜೇಯ 72 ರನ್ ಗಳಿಸಿದ ಓ’ಬ್ರಿಯಾನ್ ಗೆಲುವಿನ ರೂವಾರಿಯಾದರು.

ಇದಕ್ಕೆ ಮೊದಲು ಸತತ ನಾಲ್ಕನೆ ಬಾರಿ ಟಾಸ್ ಜಯಿಸಿದ ಅಫ್ಘಾನ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಫ್ಘಾನ್‌ನ ಆರಂಭ ಅತ್ಯಂತ ಕಳಪೆಯಾಗಿತ್ತು. 11 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾಯಕ ಅಸ್ಗರ್ ಸ್ಟಾನಿಕ್‌ಝೈ(35) ಹಾಗೂ ಹಶ್ಮತುಲ್ಲಾ ಶಾಹಿದಿ(23) 4ನೆ ವಿಕೆಟ್‌ಗೆ 46 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಶಾಹಿದಿ ಹಾಗೂ ಗುಲ್ಬದಿನ್ ನೈಬ್(2) ಬೆನ್ನುಬೆನ್ನಿಗೆ ಔಟಾದರು. ಆಗ ಅಫ್ಘಾನ್ ಸ್ಕೋರ್ 75 ರನ್‌ಗೆ 5 ವಿಕೆಟ್. ನಾಯಕ ಅಸ್ಗರ್ ಹಾಗೂ ರಶೀದ್ ಖಾನ್(0) ಮೆಕ್‌ಬ್ರೈನ್(2-39) 24ನೆ ಓವರ್ ಸತತ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.

ಕೆಳ ಕ್ರಮಾಂಕದಲ್ಲಿ ಅಮೂಲ್ಯ ಕಾಣಿಕೆ ನೀಡಿದ ಶಫಿಖುಲ್ಲಾ(42), ಮುಹಮ್ಮದ್ ನಬಿ(41) ಹಾಗೂ ದೌಲತ್ ಝದ್ರಾನ್(ಅಜೇಯ 41) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಐರ್ಲೆಂಡ್‌ನ ಪರ ಕೇವಿನ್ ಓ’ಬ್ರಿಯಾನ್(4-26), ಮುಲ್ಡರ್(3-57) ಹಾಗೂ ಮೆಕ್‌ಬ್ರೈನ್(2-39) 9 ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

ಅಫ್ಘಾನಿಸ್ತಾನ: 49.5 ಓವರ್‌ಗಳಲ್ಲಿ 220 ರನ್‌ಗೆ ಆಲೌಟ್

(ಶಫಿಖುಲ್ಲಾ 42, ಮುಹಮ್ಮದ್ ನಬಿ 41, ದೌಲತ್ ಝದ್ರಾನ್ ಅಜೇಯ 41, ಕೆವಿನ್ ಓ’ಬ್ರಿಯಾನ್ 4-26,ಮುಲ್ಡರ್ 3-57)

ಐರ್ಲೆಂಡ್: 46.5 ಓವರ್‌ಗಳಲ್ಲಿ 224/7

(ಕೆವಿನ್ ಒ’ಬ್ರಿಯಾನ್ ಅಜೇಯ 72, ವಿಲ್ಸನ್ 41, ನಬಿ 4-30, ರಶೀದ್ ಖಾನ್ 2-50)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News