ಆಸ್ಟ್ರೇಲಿಯದ ಪತ್ರಕರ್ತರು ವಿರಾಟ್ ಕೊಹ್ಲಿ ಘನತೆಗೆ ಚ್ಯುತಿ ತರಲು ಯತ್ನಿಸುತ್ತಿದ್ದಾರೆ: ಕ್ಲಾರ್ಕ್

Update: 2017-03-22 18:25 GMT

ಹೊಸದಿಲ್ಲಿ, ಮಾ.22: ಆಸ್ಟ್ರೇಲಿಯದ ಕೆಲವು ಪತ್ರಕರ್ತರು ಭಾರತದ ನಾಯಕ ವಿರಾಟ್ ಕೊಹ್ಲಿ ಘನತೆಗೆ ಚ್ಯುತಿ ತರಲು ಯತ್ನಿಸುತ್ತಿದ್ದಾರೆ. ಆ ಬಗ್ಗೆ ಕೊಹ್ಲಿ ತಲೆಕೆಡಿಸಿಕೊಳ್ಳಲಾರದು ಎಂದು ಆಸ್ಟ್ರೇಲಿಯದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯದ ಡೈಲಿ ಟೆಲಿಗ್ರಾಫ್ ಪತ್ರಿಕೆಯು ಕೊಹ್ಲಿ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಿತ್ತು. ಅಧ್ಯಕ್ಷ ಟ್ರಂಪ್‌ರಂತೆಯೇ ಕೊಹ್ಲಿ ಕೂಡ ತಮ್ಮ ಮುಖವನ್ನು ಉಳಿಸಿಕೊಳ್ಳಲು ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಪತ್ರಿಕೆ ಟೀಕಿಸಿತ್ತು.

ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿದ ಕ್ಲಾರ್ಕ್,‘‘ ವಿರಾಟ್ ಕೊಹ್ಲಿಯನ್ನು ಡೊನಾಲ್ಡ್ ಟ್ರಂಪ್‌ಗೆ ಹೋಲಿಕೆ ಮಾಡಿರುವ ಕ್ರಮ ಸರಿಯಲ್ಲ. ನಾನು ಕೊಹ್ಲಿಯನ್ನು ಇಷ್ಟಪಡುತ್ತೇನೆ. ಆಸ್ಟ್ರೇಲಿಯದ ಜನತೆಯೂ ಇಷ್ಟಪಡುತ್ತಾರೆ. ಕೊಹ್ಲಿ ಆಟದ ಶೈಲಿಯನ್ನು ನಾನು ಯಾವಾಗಲೂ ಇಷ್ಟಪಡುವೆ. ಆಸ್ಟ್ರೇಲಿಯದ ಕೆಲವು ಪತ್ರಕರ್ತರು ಕೊಹ್ಲಿಯ ಘನತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಆದರೆ,ವಿರಾಟ್ ಈ ಬಗ್ಗೆ ಚಿಂತಿಸುವ ಗೋಜಿಗೆ ಹೋಗಬಾರದು ಎಂದು ಇಂಡಿಯಾ ಟುಡ್ ನ್ಯೂಸ್ ಚಾನಲ್‌ಗೆ ಕ್ಲಾರ್ಕ್ ತಿಳಿಸಿದ್ದಾರೆ.

ಆಸ್ಟ್ರೇಲಿಯ ಮಾಧ್ಯಮಗಳ ಬಗ್ಗೆ ನಾಯಕ ಸ್ಟೀವ್ ಸ್ಮಿತ್ ತಲೆಕೆಡಿಸಿಕೊಳ್ಳಬಾರದು. ಆಸ್ಟ್ರೇಲಿಯದ ಮಾಧ್ಯಮಗಳ ಅಭಿಪ್ರಾಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಎರಡೂ ತಂಡಗಳ ನಾಯಕರು ಧರ್ಮಶಾಲಾದಲ್ಲಿ ಪಂದ್ಯ ಗೆಲ್ಲುವತ್ತ ತಮ್ಮ ತಂಡವನ್ನು ಸಜ್ಜುಗೊಳಿಸಲು ಗಮನ ನೀಡಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News