ಶ್ರೀಲಂಕಾ ದಿನಪತ್ರಿಕೆಯಿಂದ ಲಂಕಾ ಕ್ರಿಕೆಟ್ ತಂಡಕ್ಕೆ ‘ಶ್ರದ್ದಾಂಜಲಿ’

Update: 2017-03-22 18:29 GMT

 ಕೊಲಂಬೊ, ಮಾ.22: ಟೆಸ್ಟ್ ಆಡುವ ರಾಷ್ಟ್ರಗಳಲ್ಲಿ ದುರ್ಬಲ ತಂಡವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ ಸೋತಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಶ್ರೀಲಂಕಾದ ದಿನಪತ್ರಿಕೆಗಳು ಶ್ರೀಲಂಕಾ ಕ್ರಿಕೆಟ್ ತಂಡ ಸತ್ತುಹೋಗಿದೆ ಎಂದು ಘೋಷಿಸಿವೆ.

  ಸುಮಾರು 135 ವರ್ಷಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಅಲ್ಲಿನ ಮಾಧ್ಯಮಗಳು ಸತ್ತು ಹೋಗಿದೆ ಎಂದು ಘೋಷಿಸಿದ್ದಲ್ಲದೆ ಚಿತಾಭಸ್ಮವನ್ನು ಆಸ್ಟ್ರೇಲಿಯಕ್ಕೆ ಕಳುಹಿಸಿಕೊಟ್ಟಿದ್ದವು. ಆ ಬಳಿಕ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವಿನ ಸರಣಿ ಆ್ಯಶಸ್(ಚಿತಾಭಸ್ಮ) ಸರಣಿ ಎಂದೇ ಖ್ಯಾತಿ ಪಡೆದಿದ್ದು, ಈ ಸರಣಿ ಈಗಲೂ ಪ್ರತಿಷ್ಠಿತ ಸರಣಿಯಾಗಿ ಪರಿಣಮಿಸಿದೆ.

1882ರಲ್ಲಿ ಆಸ್ಟ್ರೇಲಿಯ ತಂಡದ ಇಂಗ್ಲೆಂಡ್ ತಂಡವನ್ನು ಅದರದೇ ನೆಲದಲ್ಲಿ ಸೋಲಿಸಿತ್ತು. ಇದರಿಂದ ಕೆರಳಿದ್ದ ಇಂಗ್ಲೆಂಡ್‌ನಿಂದ ಪ್ರಕಟಿಸಲ್ಪಡುತ್ತಿದ್ದ ಸ್ಪೋರ್ಟಿಂಗ್ ಟೈಮ್ಸ್ ದಿನಪತ್ರಿಕೆಯು ಇಂಗ್ಲೆಂಡ್ ತಂಡಕ್ಕೆ ಶ್ರದ್ದಾಂಜಲಿ ಸಲ್ಲಿಸಿತ್ತು.

ಇದೀಗ ಶ್ರೀಲಂಕಾ ದಿನಪತ್ರಿಕೆಯು ಇಂಗ್ಲೆಂಡ್ ಪತ್ರಿಕೆಯನ್ನು ಅನುಕರಿಸಿದ್ದು, ‘ಶ್ರೀಲಂಕಾ ತಂಡದ ಆತ್ಮಕ್ಕೆ ಶಾಂತಿ ಸಿಗಲಿ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

2017ರ ಮಾರ್ಚ್ 19 ರಂದು ಸತ್ತುಹೋಗಿರುವ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಅಕ್ಕರೆಯಿಂದ ನೆನಪಿಸಿಕೊಳ್ಳುತ್ತೇವೆ ಎಂದು ದಿನಪತ್ರಿಕೆಯಲ್ಲಿ ಬರೆಯಲಾಗಿದೆ.

 ಮೃತದೇಹದ ಅಂತಿಮಸಂಸ್ಕಾರ ನೆರವೇರಿಸಲಾಗಿದ್ದು, ಚಿತಾಭಸ್ಮವನ್ನು ಬಾಂಗ್ಲಾದೇಶಕ್ಕೆ ಕೊಂಡೊಯ್ಯಲಾಗುವುದು ಎಂದು ಪತ್ರಿಕೆ ಬರೆದಿದೆ. ಮಾತ್ರವಲ್ಲ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷರು ಹಾಗೂ ಕ್ರೀಡಾಸಚಿವರು ‘ಶ್ರೀಲಂಕಾ ಕ್ರಿಕೆಟ್’ ಎಂದು ಬರೆದಿರುವ ಸಣ್ಣ ಪೆಟ್ಟಿಗೆಯನ್ನು ಹಿಡಿದಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಲಾಗಿದೆ.

ಬಾಂಗ್ಲಾದೇಶ ತಂಡ ರವಿವಾರ ಕೊಲಂಬೊದಲ್ಲಿ ಕೊನೆಗೊಂಡ ದ್ವಿತೀಯ ಟೆಸ್ಟ್ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಜಯಿಸಿ ತನ್ನ 100ನೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿತ್ತು. ಶ್ರೀಲಂಕಾ ವಿರುದ್ಧ ಆಡಿರುವ 18ನೆ ಪಂದ್ಯದಲ್ಲಿ ಮೊದಲ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿ ಸರಣಿಯನ್ನು ಸಮಬಲಗೊಳಿಸಿತ್ತು. ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧ 15ರಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿತ್ತು.

ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ಸೋತಿರುವುದು ಟೆಸ್ಟ್ ಕ್ರಿಕೆಟ್‌ನ ಕರಾಳ ದಿನವಾಗಿದೆ. ಬಾಂಗ್ಲಾದೇಶಕ್ಕೆ ಈ ಗೆಲುವು ವಿಶೇಷವಾಗಿದ್ದು, ಟೆಸ್ಟ್ ದೇಶವಾಗಿ ತಾನೆಷ್ಟು ಪ್ರಗತಿಯಾಗಿರುವೆ ಎಂದು ತೋರಿಸಿಕೊಟ್ಟಿದೆ ಎಂದು ‘ಡೈಲಿ ನ್ಯೂಸ್ ಹೆಡ್‌ಲೈನ್’ ಪತ್ರಿಕೆ ಬಾಂಗ್ಲಾದೇಶವನ್ನು ಶ್ಲಾಘಿಸಿದೆ.

ಶ್ರೀಲಂಕಾ ತಂಡದಲ್ಲಿ ಮೂಲಭೂತ ಕ್ರಮಗಳನ್ನು ಕೈಗೊಂಡು ಹಲವು ಬದಲಾವಣೆ ಮಾಡಲಾಗಿದೆ. ಆದಾಗ್ಯೂ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡವನ್ನು ಮಣಿಸಲು ಪರದಾಟ ನಡೆಸುತ್ತಿದೆ ಎಂದು ದಿನಪತ್ರಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News