ಅಂಧರ ಏಷ್ಯನ್ ಚೆಸ್ ಟೂರ್ನಿ: ಕಿಶನ್ ಗಂಗುಲಿ, ಕೃಷ್ಣ ಉಡುಪರಿಗೆ ಮೊದಲ ಜಯ
ಮಣಿಪಾಲ, ಮಾ.23: ಫಿಡೆ ರ್ಯಾಂಕಿಂಗ್ ಆಟಗಾರ ಬಾಂಗ್ಲಾ ದೇಶದ ಹುಸೇನ್ ಇಜಾಜ್ ಅಲ್ಲದೇ ಭಾರತದ ಕಿಶನ್ ಗಂಗುಲಿ, ಎಂ.ಅಶ್ವಿನ್, ಕೃಷ್ಣ ಉಡುಪ, ಸ್ವಪ್ನೀಲ್ ಶಾ, ಯುಧ್‌ಜಿತ್, ಶಿರಿಸ್ ಪಾಟೀಲ್, ಸೌಂದರ್ಯ ಕುಮಾರ್ ಪ್ರಧಾನ್ ಹಾಗೂ ಆರ್ಯನ್ ಜೋಷಿ ಅವರು ಅಂಧರಿಗಾಗಿ ಕೆಎಂಸಿ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿಯೇಷನ್ (ಐಬಿಸಿಎ) ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನ ಪಂದ್ಯಗಳನ್ನು ಜಯಿಸಿದ್ದಾರೆ.
ಅಂಧರ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌ಬಿ), ಐಬಿಸಿಎ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್‌ಗಳ ಸಹಯೋಗದೊಂದಿಗೆ ಈ ಟೂರ್ನಿಯನ್ನು ಮಣಿಪಾಲ ವಿವಿಯ ಆಶ್ರಯದಲ್ಲಿ ಮೊದಲ ಬಾರಿಗೆ ಮಣಿಪಾಲದಲ್ಲಿ ಆಯೋಜಿಸುತ್ತಿವೆ.
ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಇಂದು ಸ್ಪರ್ಧೆಗಳನ್ನು ಉದ್ಘಾಟಿಸಿದರು. ಫಿಲಿಪ್ಪಿನ್ಸ್‌ನ ಆಟಗಾರರು ಇಂದು ಆಗಮಿಸಿದರೆ, ಯಮೆನ್ ತಂಡ ಗೈರುಹಾಜರಾಗಿತ್ತು.
ಇಂದಿನ ಮೊದಲ ಸುತ್ತಿನ ಪಂದ್ಯಗಳಲ್ಲಿ ಇಬ್ಬರನ್ನು ಹೊರತು ಪಡಿಸಿ ಉಳಿದ ಭಾರತದ ಆಟಗಾರರು ಸುಲಭದ ಜಯ ದಾಖಲಿಸಿದರು. ಇಬ್ಬರ ಪಂದ್ಯ ಡ್ರಾಗೊಂಡಿತು. ನಾಳೆ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ.