ಆಸ್ಟ್ರೇಲಿಯ ಕ್ರಿಕೆಟಿಗ ಶಾನ್ ಟೇಟ್‌ಗೆ ಭಾರತೀಯ ಪೌರತ್ವ!
ಮುಂಬೈ, ಮಾ.24: ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ಇನ್ನು ಮುಂದೆ ಭಾರತದ ನಾಗರಿಕ. ಹೌದು ಇದು ಅಚ್ಚರಿಯೇನಿಸಿದರೂ ಸತ್ಯ. ವೇಗದ ಬೌಲರ್ ತನ್ನ ಬಳಿಯಿರುವ ಪ್ರವಾಸಿ ಭಾರತೀಯ ನಾಗರಿಕ ಕಾರ್ಡ್‌ನ್ನು ಇತ್ತೀಚೆಗೆ ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ತಾನು ಭಾರತೀಯ ನಾಗರಿಕ ಎಂಬ ಖಚಿತಪಡಿಸಿದ್ದಾರೆ.
ಟೇಟ್ ಭಾರತದ ರೂಪದರ್ಶಿ ಮಶೂಮ್ ಸಿಂಘಾರನ್ನು 2014ರ ಜೂ.12 ರಂದು ಮುಂಬೈನಲ್ಲಿ ವಿವಾಹವಾಗಿದ್ದರು. 2010ರಲ್ಲಿ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ವೇಳೆ ಮಶೂಮ್ ಸಿಂಘಾರನ್ನು ಟೇಟ್ ಮೊದಲ ಬಾರಿ ಭೇಟಿಯಾಗಿದ್ದರು. ಟ್ವೀಟರ್ ಪೇಜ್‌ನಲ್ಲಿ ಭಾರತದ ಪಾಸ್‌ಪೋರ್ಟ್‌ನ್ನು ಶೇರ್ ಮಾಡಿರುವ ಟೇಟ್ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆಂಬ ವದಂತಿಯನ್ನು ಪುಷ್ಟೀಕರಿಸಿದ್ದಾರೆ.
ವಿಶ್ವ ಕಂಡ ವೇಗದ ಬೌಲರ್ ಪೈಕಿ ಓರ್ವರಾಗಿರುವ ಟೇಟ್ 2007ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯ ತಂಡದ ಸ್ಟಾರ್ ಆಟಗಾರನಾಗಿದ್ದಾರೆ. ಟೇಟ್ ಎರಡನೆ ಅತ್ಯಂತ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆ ನಿರ್ಮಿಸಿದ್ದಾರೆ.
ಟೇಟ್ ಆಸ್ಟ್ರೇಲಿಯದ ಪರ ಈ ತನಕ 35 ಏಕದಿನ, 21 ಟ್ವೆಂಟಿ-20 ಹಾಗೂ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.