×
Ad

ರಾಜೀನಾಮೆ ತಾತ್ಕಾಲಿಕವಾಗಿ ಹಿಂಪಡೆಯಲು ಮನೋಹರ್ ಸಮ್ಮತಿ

Update: 2017-03-24 23:45 IST

 ಹೊಸದಿಲ್ಲಿ, ಮಾ.24: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ(ಐಸಿಸಿ) ಸ್ವತಂತ್ರ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದ ಶಶಾಂಕ್ ಮನೋಹರ್ ಐಸಿಸಿ ಮಂಡಳಿ ಸಭೆಯ ಕೋರಿಕೆಯ ಮೇರೆಗೆ ರಾಜೀನಾಮೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಸಮ್ಮತಿಸಿದ್ದಾರೆ.

ತಾವು ರಾಜೀನಾಮೆ ಹಿಂಪಡೆಯಬೇಕು ಇಲ್ಲವೇ ಈಗ ನಡೆಯುತ್ತಿರುವ ಐಸಿಸಿ ಆಡಳಿತ ಹಾಗೂ ಹಣಕಾಸು ಸ್ವರೂಪಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಗಿಯುವ ತನಕ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯುವಂತೆ ಮನೋಹರ್‌ರನ್ನು ವಿನಂತಿಸಿಕೊಳ್ಳಲಾಗಿದೆ ಎಂದು ಐಸಿಸಿ ಶನಿವಾರ ತಿಳಿಸಿದೆ.

‘‘ಐಸಿಸಿ ನಿರ್ದೇಶಕರು ವ್ಯಕ್ತಪಡಿಸಿರುವ ಭಾವನೆ ಹಾಗೂ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ನಾನು ಗೌರವಿಸುವೆ. ವೈಯಕ್ತಿಕ ಕಾರಣದಿಂದ ಐಸಿಸಿ ಮುಖ್ಯಸ್ಥ ಸ್ಥಾನ ತ್ಯಜಿಸುವ ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಕೊನೆಗೊಳ್ಳುವ ತನಕ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯಲು ಬಯಸಿದ್ದೇನೆ’’ ಎಂದು ಪತ್ರಿಕಾಪ್ರಕಟನೆಯೊಂದರಲ್ಲಿ ಮನೋಹರ್ ತಿಳಿಸಿದ್ದಾರೆ.

 ಭಾರತೀಯ ಕ್ರಿಕೆಟ್ ಮಂಡಳಿಯನ್ನು ಹೇಗೆ ನಡೆಸಬೇಕೆಂದು ಜನವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ 59ರ ಹರೆಯದ ಮನೋಹರ್ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿ ಸಮಿತಿ ಸದಸ್ಯರಾದ ವಿಕ್ರಂ ಲಿಮಾಯೆ ಹಾಗೂ ವಿನೋದ್ ರಾಯ್‌ಗೆ ಐಸಿಸಿ ಹುದ್ದೆಯನ್ನು ತ್ಯಜಿಸುವ ಬಗ್ಗೆ ಮನೋಹರ್ ದೃಢಪಡಿಸಿದ್ದರು ಎಂದು ಮಾ.16 ರಂದು ಇಎಸ್‌ಪಿಎನ್ ಮಾಡಿರುವ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News