100 ಶೇ. ದೈಹಿಕ ಕ್ಷಮತೆ ಇದ್ದರೆ 4ನೆ ಟೆಸ್ಟ್ ಆಡುತ್ತೇನೆ: ಕೊಹ್ಲಿ
ಧರ್ಮಶಾಲಾ, ಮಾ.24: ತಾನು 100 ಶೇ. ಫಿಟ್ ಆಗಿದ್ದರೆ ಮಾತ್ರ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯವನ್ನು ಆಡುವೆ ಎಂದು ಹೇಳಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾಗವಹಿಸುವ ಬಗ್ಗೆ ರಹಸ್ಯ ಕಾಪಾಡಿಕೊಂಡಿದ್ದಾರೆ.
ಶನಿವಾರ ಆರಂಭವಾಗಲಿರುವ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಮೈದಾನಕ್ಕೆ ಇಳಿಯುವ ಮೊದಲು ಫಿಟ್‌ನೆಸ್ ಪರೀಕ್ಷೆಗೆ ಒಳಪಡುವೆ. ನಾನು ಒಂದು ವೇಳೆ ಫೈನಲ್ ಪಂದ್ಯ ಆಡಲು 100 ಶೇ. ಫಿಟ್ ಇದ್ದರೆ ಮಾತ್ರ ಮೈದಾನಕ್ಕೆ ಇಳಿಯುವೆ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ 28ರ ಹರೆಯದ ಕೊಹ್ಲಿ ತಿಳಿಸಿದ್ದಾರೆ.
‘‘ಗಾಯದೊಂದಿಗೆ ಆಡಿದರೆ ಆಗುವ ಅಪಾಯದ ಬಗ್ಗೆ ಫಿಸಿಯೋ ಚೆನ್ನಾಗಿ ವಿವರಿಸಿದ್ದಾರೆ. ಎಷ್ಟೊಂದು ಅಪಾಯವಿದೆಯೆಂದು ತನಗೆ ಗೊತ್ತಿಲ್ಲ. ಆದರೆ,ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾದರೆ ಮಾತ್ರ ಮೈದಾನಕ್ಕೆ ಇಳಿಯುತ್ತೇನೆ’’ ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು, ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಕೇವಲ 46 ರನ್ ಗಳಿಸಿದ್ದಾರೆ. ಸರಣಿ 1-1 ರಿಂದ ಸಮಬಲಗೊಂಡಿದ್ದು ಕ್ಲೈಮ್ಯಾಕ್ಸ್ ಹಂತ ತಲುಪಿದೆ.
ಗುರುವಾರ ಭಾರತ ತಂಡ ಮುಂಬೈನ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಧರ್ಮಶಾಲಾಕ್ಕೆ ಆಗಮಿಸುವಂತೆ ಕರೆ ನೀಡಿದ್ದು, ಅಯ್ಯರ್ ಅವರು ಕೊಹ್ಲಿ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಭಾರತ ಕೊಹ್ಲಿ ನಾಯಕತ್ವದಲ್ಲಿ ಸ್ವದೇಶದಲ್ಲಿ ಆಡಿರುವ ಕಳೆದ 12 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿದೆ. ಕೊಹ್ಲಿ ಶುಕ್ರವಾರ ನೆಟ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಆದರೆ, ಗಾಯದ ಸಂಪೂರ್ಣ ಅರಿವು ಪಂದ್ಯ ಆಡುವಾಗ ಗೊತ್ತಾಗುತ್ತದೆ. ಕೊಹ್ಲಿ ಫಿಸಿಯೋ ನೀಡುವ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ