×
Ad

ಧರ್ಮಶಾಲಾ ಟೆಸ್ಟ್, ಐಪಿಎಲ್‌ಗೆ ಹಣ ಬಿಡುಗಡೆಗೆ ಬಿಸಿಸಿಐಗೆ ಸುಪ್ರೀಂ ಆದೇಶ

Update: 2017-03-24 23:50 IST

ಹೊಸದಿಲ್ಲಿ, ಮಾ.24: ಧರ್ಮಶಾಲಾದಲ್ಲಿ ಶನಿವಾರ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯ ನಡುವಿನ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಆಯೋಜನೆಗೆ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಗೆ (ಎಚ್‌ಪಿಸಿಎ)2.5 ಕೋ.ರೂ. ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ಧರ್ಮಶಾಲಾದಲ್ಲಿ ಟೆಸ್ಟ್ ಆಯೋಜನೆಗೆ ಹಣ ಬಿಡುಗಡೆಗೆ ಸಂಬಂಧಿಸಿ ಎಚ್‌ಪಿಸಿಎ ಹಾಗೂ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ನಡುವೆ ಒಮ್ಮತ ಏರ್ಪಟ್ಟಿರಲಿಲ್ಲ. ಆಗ ಎಚ್‌ಪಿಸಿಎ ಸುಪ್ರೀಂಕೋರ್ಟಿನ ಮೊರೆ ಹೋಗಿದ್ದು, ಶನಿವಾರ ಆರಂಭವಾಗಲಿರುವ ಪಂದ್ಯಕ್ಕೆ ವಿನೋದ್ ರಾಯ್ ನೇತೃತ್ವದ ಸಿಒಎ ತಂಡ ಒಪ್ಪಂದದಂತೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ವಾದಿಸಿತ್ತು. ಎಚ್‌ಪಿಸಿಎ ಬಳಿ ಸಾಕಷ್ಟು ಹಣವಿದೆ. 90 ಕೋ.ರೂ. ಹಣ ಹೊಂದಿರುವ ಎಚ್‌ಪಿಸಿಎಗೆ ಪಂದ್ಯ ಆಯೋಜಿಸುವ ಸಾಮರ್ಥ್ಯವಿದೆ ಎಂದು ಸಿಒಎ ಉತ್ತರಿಸಿತ್ತು.

ಎಚ್‌ಪಿಸಿಎ ವಾದವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಧರ್ಮಶಾಲಾ ಟೆಸ್ಟ್‌ಗೆ ಹಣ ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಸೂಚಿಸಿದ್ದಲ್ಲದೆ ಎ.5 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸುಗಮವಾಗಿ ಸಾಗಲು ಹಣ ಬಿಡುಗಡೆ ಮಾಡುವಂತೆ ಆದೇಶಿಸಿತು.

ಅನರ್ಹ ಸದಸ್ಯರ ಬಗ್ಗೆ ಸ್ಪಷ್ಟನೆ: ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಸದಸ್ಯರು ಪ್ರಮುಖ ಹುದ್ದೆಯಲ್ಲಿರಲು ಅನರ್ಹರಾಗಿರುವ ವಿಷಯಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಇಂದು ಸ್ಪಷ್ಟನೆ ನೀಡಿದೆ.

ಬಿಸಿಸಿಐನಲ್ಲಿ ಯಾವುದೇ ಹುದ್ದೆಯಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದವರು ಬಿಸಿಸಿಐನಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಆದರೆ, ಅವರು ಯಾವುದೇ ರಾಜ್ಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬಹುದು. ಅದೇ ರೀತಿ ರಾಜ್ಯ ಸಂಸ್ಥೆಯೊಂದರಲ್ಲಿ 9 ವರ್ಷ ಸೇವೆ ಸಲ್ಲಿಸಿದ ಅಧಿಕಾರಿ ರಾಜ್ಯ ಸಂಸ್ಥೆಯಲ್ಲಿ ಯಾವುದೇ ಹುದ್ದೆಯನ್ನು ಹೊಂದುವಂತಿಲ್ಲ. ಆದರೆ, ಅವರು ಬಿಸಿಸಿಐನಲ್ಲಿ ಹುದ್ದೆ ಪಡೆಯಲು ಅರ್ಹರಾಗಿದ್ದಾರೆ ಎಂದು ಉಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News