ಕೊಚ್ಚಿ ಕ್ರೀಡಾಂಗಣ ಕಾಮಗಾರಿ ವಿಳಂಬ: ಫಿಫಾ ನಿಯೋಗ ಕಳವಳ
ಕೊಚ್ಚಿ, ಮಾ.24: ಈ ವರ್ಷಾಂತ್ಯದಲ್ಲಿ ನಡೆಯಲಿರುವ ಅಂಡರ್-17 ವಿಶ್ವಕಪ್ ಆತಿಥ್ಯವಹಿಸಿರುವ ಭಾರತದ ಆರು ತಾಣಗಳ ಪೈಕಿ ಒಂದಾಗಿರುವ ಕೊಚ್ಚಿಯ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನ ಕಾಮಗಾರಿಯ ಪ್ರಗತಿಯ ಬಗ್ಗೆ ಫಿಫಾ ತಪಾಸಣಾ ತಂಡ ‘ತೀವ್ರ ಕಳವಳ’ ವ್ಯಕ್ತಪಡಿಸಿದೆ. ಮೇ 15ರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.
‘‘ಮುಂಬರುವ ವಿಶ್ವಕಪ್ ಆತಿಥ್ಯವಹಿಸಿರುವ ಕೊಚ್ಚಿಯ ಜೆಎನ್‌ಐ ಸ್ಟೇಡಿಯಂನ ಕಾಮಗಾರಿ ನಿರೀಕ್ಷಿತಮಟ್ಟದಲ್ಲಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟವರು ಸೂಕ್ತ ಹೆಜ್ಜೆ ಇಡಬೇಕಾದ ಅಗತ್ಯವಿದೆ. ಕೊಚ್ಚಿಯಲ್ಲಿ ಫುಟ್ಬಾಲ್ ಸಂಸ್ಕೃತಿ ಸಮೃದ್ಧವಾಗಿದೆ. ಸರಿಯಾದ ಸಮಯಕ್ಕೆ ಎಲ್ಲ ಅಗತ್ಯತೆಯನ್ನು ಪೂರೈಸಲು ವಿಫಲವಾದರೆ ಅದೊಂದು ದೊಡ್ಡ ಅವಮಾನಕಾರಿ ವಿಷಯವಾಗುತ್ತದೆ’’ ಎಂದು ಫಿಫಾ ಅಧಿಕಾರಿ ಜೈಮಿ ಯಾರ್ಝಾ ಸ್ಟೇಡಿಯಂಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಫಿಫಾ ಹಾಗೂ ಸ್ಥಳೀಯ ಸಂಘಟನಾ ಸಮಿತಿಯ 21 ಸದಸ್ಯರ ಸಮಿತಿಯು ವಿಶ್ವಕಪ್ ಆತಿಥ್ಯವಹಿಸಿರುವ ಸ್ಟೇಡಿಯಂಗಳಿಗೆ ಭೇಟಿ ನೀಡುತ್ತಿದೆ.
‘‘ನಾನು ಕಳೆದ ಫೆಬ್ರವರಿಯಲ್ಲಿ ಕೊಚ್ಚಿಗೆ ಭೇಟಿ ನೀಡಿದ್ದೆ. ಆಗ ಕೆಲವು ಕಾಮಗಾರಿ ನಡೆದಿದ್ದವು. ಅದು ಸಾಕಾಗುವುದಿಲ್ಲ. ಇದೊಂದು ತುಂಬಾ ಕಳವಳಕಾರಿ ವಿಷಯ. ರಾಜ್ಯಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಷರತ್ತುಬದ್ಧ ಬೆಂಬಲ ನೀಡಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಸ್ಟೇಡಿಯಂನಲ್ಲಿ ಸಾಕಷ್ಟು ಬದಲಾವಣೆಯಾಗಬೇಕಾದ ಅವಶ್ಯವಿದೆ. ಮೇ 15ರೊಳಗೆ ಕಾಮಗಾರಿ ಮುಗಿಯಬೇಕು. ದೊಡ್ಡ ಪ್ರಮಾಣದ ನವೀಕರಣ ಕಾರ್ಯ ನಡೆಯಬೇಕಾಗಿದ್ದು, ಕಾಮಗಾರಿ ವೇಗವಾಗಿ ನಡೆಯಬೇಕಾಗಿದೆ. ಆಟಗಾರರ ತರಬೇತಿಯ ಸ್ಥಳದಲ್ಲಿನ ತಯಾರಿಯ ಬಗ್ಗೆ ನನಗೆ ತೃಪ್ತಿಯಾಗಿದೆ. ಆದರೆ, ಮುಖ್ಯ ಮೈದಾನದಲ್ಲಿನ ಅವ್ಯವಸ್ಥೆ ಚಿಂತೆಗೀಡುಮಾಡಿದೆ’’ಎಂದು ಫಿಫಾ ಅಧಿಕಾರಿ ಹೇಳಿದ್ದಾರೆ.
ಫಿಫಾ ತಪಾಸಣಾ ತಂಡ ನವಿಮುಂಬೈ ಹಾಗೂ ಗುವಾಹಟಿಗೆ ಭೇಟಿ ನೀಡಲಿದ್ದು, ಕೋಲ್ಕತಾ ಭೇಟಿಯೊಂದಿಗೆ ತನ್ನ ಸ್ಟೇಡಿಯಂಗಳ ತಪಾಸಣೆ ಕಾರ್ಯವನ್ನು ಕೊನೆಗೊಳಿಸಲಿದೆ.