×
Ad

ದುಬೈ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟ: ಭಾರತಕ್ಕೆ 13 ಪದಕ

Update: 2017-03-24 23:52 IST

ದುಬೈ, ಮಾ.24: ದುಬೈ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಫಾಝಾ ಇಂಟರ್‌ನ್ಯಾಶನಲ್ ಐಪಿಸಿ ಅಥ್ಲೆಟಿಕ್ಸ್ ಜಿಪಿ ಟೂರ್ನಿಯಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್‌ಗಳು 13 ಪದಕಗಳನ್ನು ಜಯಿಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಭಾರತ ಒಟ್ಟು 5 ಚಿನ್ನದ ಪದಕ ಜಯಿಸಿದ್ದು, ಸುಂದರ್ ಸಿಂಗ್ ಗುರ್ಜರ್ 3 ಚಿನ್ನದ ಪದಕ ಜಯಿಸಿದ್ದಾರೆ.

ಶಾಟ್‌ಪುಟ್ ಇವೆಂಟ್‌ನ ಟಿ 44-46 ವಿಭಾಗದಲ್ಲಿ 13.36 ಮೀ. ದೂರ ಶಾಟ್‌ಪುಟ್ ಎಸೆದಿರುವ ಗುರ್ಜರ್ ಕೂಟದಲ್ಲಿ ಮೂರನೆ ಚಿನ್ನದ ಪದಕ ಜಯಿಸಿದರು. ಇದಕ್ಕೆ ಮೊದಲು ಜಾವೆಲಿನ್ ಎಸೆತ ಹಾಗೂ ಡಿಸ್ಕಸ್ ಎಸೆತ ವಿಭಾಗದಲ್ಲಿ ಸ್ವರ್ಣ ಸಂಪಾದಿಸಿದ್ದರು.

ಸುಂದರ್ ಜುಲೈನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಬಿರುಸಿನ ತಯಾರಿ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ಪ್ರಾಯೋಜಕರು ಲಭಿಸಿದ್ದಾರೆ.

ಮಹಿಳಾ ಅಥ್ಲೀಟ್‌ಗಳು ಭಾರತದ ಪದಕದ ಪಟ್ಟಿಗೆ ಅಮೂಲ್ಯ ಕಾಣಿಕೆ ನೀಡಿದರು. ಮಹಿಳೆಯರ ವೀಲ್‌ಚೇರ್ ಶಾಟ್‌ಪುಟ್ ಎಫ್-55 ವಿಭಾಗದಲ್ಲಿ ಭಾರತ ಚಿನ್ನ ಹಾಗೂ ಬೆಳ್ಳಿ ಜಯಿಸಿದೆ. 5.76 ಮೀ.ದೂರ ಶಾಟ್‌ಪುಟ್ ಎಸೆದ ಕರಮ್‌ಜ್ಯೋತಿ ಚಿನ್ನದ ಪದಕ ಗೆದ್ದುಕೊಂಡರು. ಶತಾಬ್ದಿ ಅವಸ್ಥಿ(5.71 ಮೀ.) ಬೆಳ್ಳಿ ಪದಕ ಜಯಿಸಿದರು.

ಎಫ್13/20/42/44 ವಿಭಾಗದಲ್ಲಿ ಹೈಜಂಪ್ ಪಟುಗಳಾದ ಶರದ್‌ಕುಮಾರ್ ಹಾಗೂ ಕನ್ನಡಿಗ ಗಿರೀಶ್ ಎಚ್.ಎನ್. ಕ್ರಮವಾಗಿ 1.66 ಮೀ. ಹಾಗೂ 1.63 ಮೀ. ದೂರ ಜಿಗಿದು ಭಾರತಕ್ಕೆ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News