×
Ad

ಅಂಧರ ಏಷ್ಯನ್ ಚೆಸ್: ಕಿಶನ್‌ಗೆ ಮಣಿದ ಎಜಾಝ್

Update: 2017-03-26 20:52 IST

ಉಡುಪಿ, ಮಾ.26: ನಾಲ್ಕನೇ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಟೂರ್ನಿಯ ಅತ್ಯಧಿಕ ಫಿಡೆ ಶ್ರೇಯಾಂಕಿತ ಆಟಗಾರ ಬಾಂಗ್ಲಾದೇಶದ ಹುಸೈನ್ ಎಜಾಝ್‌ರನ್ನು ಪರಾಭವಗೊಳಿಸಿದ ಅಂಧರ ರಾಷ್ಟ್ರೀಯ 'ಎ' ಚೆಸ್ ಚಾಂಪಿಯನ್ ಕರ್ನಾಟಕದ ಕಿಶನ್ ಗಂಗುಲಿ ಅಂಧರ ಐಬಿಸಿಎ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗರಿಷ್ಠ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.

ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿಯೇಷನ್ ವತಿಯಿಂದ ಮಣಿಪಾಲ ವಿವಿ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆದಿರುವ ಟೂರ್ನಿಯ ಐದನೇ ದಿನದಾಟದಲ್ಲಿ ಕಿಶನ್ ಗಂಗುಲಿ ಅವರು ನಾಲ್ಕು ಗಂಟೆಗಳ ಮ್ಯಾರಥಾನ್ ಹೋರಾಟದ ಕೊನೆಗೆ 75ನೇ ನಡೆಯಲ್ಲಿ ಎದುರಾಳಿಯನ್ನು ಮಣಿಸುವಲ್ಲಿ ಯಶಸ್ವಿಯಾದರು.

 ಅಗ್ರಸೀಡ್ ಆಟಗಾರ ಎಜಾಝ್ ವಿರುದ್ಧದ ಪಂದ್ಯದಲ್ಲಿ ಕಿಶನ್ ಬಿಳಿಕಾಯಿಗಳೊಂದಿಗೆ ಆಡಿದರು. ಆಟದ 10ನೇ ನಡೆಯಲ್ಲಿ ಹುಸೈನ್ ಅವರು ತನ್ನ ನಡೆಯಲ್ಲಿ ಸಣ್ಣ ತಪ್ಪೆಸಗಿದರು. ಆದರೆ ಈ ಅವಕಾಶವನ್ನು ಕೂಡಲೇ ಬಾಚಿಕೊಂಡ ಕಿಶನ್ ಎದುರಾಳಿ ಮೇಲೆ ಒತ್ತಡ ಹೇರುತ್ತಾ ಸಾಗಿದರು.

ಆಟ ಸಾಗಿದಂತೆ ಕಿಶನ್ ಸಹ ನಡೆಯಲ್ಲಿ ತಪ್ಪೆಸಗಿದರೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ಎಜಾಝ್ ವಿಫಲರಾಗಿ ಅಂತಿಮವಾಗಿ ಸೋಲೊಪ್ಪಿಕೊಂಡರು. ಅವರು ತನ್ನ ಎದುರಾಳಿ ಭಾರತದ ಯುಧ್‌ಜೀತ್ ಡೇ ವಿರುದ್ಧ ಜಯಗಳಿಸಲು ತನ್ನೆಲ್ಲಾ ಅನುಭವವನ್ನು ಧಾರೆ ಎರೆಯಬೇಕಾಯಿತು. ಟಾಪ್‌ಬೋರ್ಡ್‌ನಲ್ಲಿ ಬಿಳಿಕಾಯಿಗಳೊಂದಿಗೆ ಆಡಿದ ಎಜಾಝ್, ಕಿಂಗ್ಸ್ ಇಂಡಿಯನ್ ಆಕ್ರಮಣದೊಂದಿಗೆ ಸೆಣಸಿದರು. 21ನೇ ನಡೆಯವರೆಗೂ ಇಬ್ಬರೂ ಸಮಬಲದ ಆಟ ಪ್ರದರ್ಶಿಸಿದರು.

ಎರಡನೇ ಬೋರ್ಡ್‌ನಲ್ಲಿ ಗುಜರಾತ್‌ನ ಅಶ್ವಿನ್ ಕೆ. ಮಕ್ವಾನ್ ಅವರು ಮಹಾರಾಷ್ಟ್ರದ ಆರ್ಯನ್ ಬಿ.ಜೋಷಿ ಅವರನ್ನು ಎದುರಿಸಿದರು. ಈ ಪಂದ್ಯ ಟೂರ್ನಿಯ ಸುದೀರ್ಘ ಪಂದ್ಯವೆನಿಸಿಕೊಂಡಿತು. ಕಪ್ಪುಕಾಯಿಯೊಂದಿಗೆ ಆಡಿದ ಅಶ್ವಿನ್ ಅಂತಿಮವಾಗಿ 94ನೇ ನಡೆಯಲ್ಲಿ ಆರ್ಯನ್ ಜೋಶಿ ಅವರನ್ನು ಪರಾಭವಗೊಳಿಸಿದರು. ಈ ಎರಡು ಪಂದ್ಯ ದಿನದ ಪ್ರಧಾನ ಆಕರ್ಷಣೆಗಳೆಸಿಕೊಂಡವು.

ನಾಲ್ಕನೇ ಸುತ್ತಿನ ಕೊನೆಗೆ ಕಿಶನ್ ಗಂಗುಲಿ 4 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಎಜಾಝ್, ಅಶ್ವಿನ್, ಕೃಷ್ಣ ಉಡುಪ, ಯುಧ್‌ಜೀತ್ ಡೇ, ಸೌಂದರ್ಯ ಕುಮಾರ್ ಪ್ರಧಾನ್, ಸೋಮೆಂದರ್ ಬಿ.ಎಲ್. ತಲಾ ಮೂರು ಅಂಕ ಗಳಿಸಿ ಎರಡನೇ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

  ಇಂದಿನ ಕೆಲ ಪಂದ್ಯಗಳಲ್ಲಿ ಕೃಷ್ಣ ಉಡುಪ ಅವರು ಸಚಿನ್ ಲಹು ಅವರನ್ನು ಸೋಲಿಸಿದರೆ, ಯುಧ್‌ಜಿತ್ ಡೇ ಅವರು ವೈಶಾಲಿ ನರೇಂದ್ರ ಸಾಲ್ವಾಕರ್‌ರನ್ನು ಸೋಲಿಸಿದರು. ಪಿಲಿಪ್ಪೈನ್ಸ್‌ನ ರೊಡಾಲ್ಫ್ ಸರಿಮೆಂಟೊ ಅವರನ್ನು ಸೌಂದರ್ಯ ಕುಮಾರ್ ಪ್ರಧಾನ್ ಪರಾಭವಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News