ದೇವಧರ್ ಟ್ರೋಫಿ: ತಮಿಳುನಾಡು ಫೈನಲ್‌ಗೆ

Update: 2017-03-27 17:58 GMT

ವಿಶಾಖಪಟ್ಟಣ, ಮಾ.27: ದಿನೇಶ್ ಕಾರ್ತಿಕ್(93) ಹಾಗೂ ಜಗದೀಶನ್(71) ಸಿಡಿಸಿದ ಆಕರ್ಷಕ ಅರ್ಧಶತಕ, ಆರ್.ಎಸ್. ಶಾ(3-37) ಹಾಗೂ ಸಾಯಿ ಕಿಶೋರ್(3-39) ಅಮೋಘ ಬೌಲಿಂಗ್ ಬೆಂಬಲದಿಂದ ತಮಿಳುನಾಡು ತಂಡ ಭಾರತ ‘ಬ್ಲೂ’ ವಿರುದ್ಧದ ಪಂದ್ಯವನ್ನು 73 ರನ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾ.29ರಂದು ನಡೆಯಲಿರುವ ಫೈನಲ್‌ನಲ್ಲಿ ಪಾರ್ಥಿವ್ ಪಟೇಲ್ ನೇತೃತ್ವದ ಇಂಡಿಯಾ ‘ಬ್ಲೂ’ ತಂಡವನ್ನು ಎದುರಿಸಲಿದೆ.

ಇಲ್ಲಿನ ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಜಯ್ ಹಝಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 303 ರನ್ ಗಳಿಸಿದೆ.

ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್(93 ರನ್, 98 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಜಗದೀಶನ್(71 ರನ್,82 ಎಸೆತ, 4 ಬೌಂಡರಿ, 2 ಸಿಕ್ಸರ್)3ನೆ ವಿಕೆಟ್‌ಗೆ 159 ರನ್ ಜೊತೆಯಾಟ ನಡೆಸಿ ತಮಿಳುನಾಡು ತಂಡ 303 ರನ್ ಗಳಿಸಲು ನೆರವಾದರು. ಭಾರತ ‘ಎ’ ಪರ ಶಾರ್ದೂಲ್ ಠಾಕೂರ್(3-49) ಯಶಸ್ವಿ ಬೌಲರ್ ಎನಿಸಿಕೊಂಡರು.

 ಗೆಲ್ಲಲು 304 ರನ್ ಗುರಿ ಪಡೆದಿದ್ದ ಭಾರತ ‘ಎ’ ತಂಡ ಆರಂಭಿಕ ದಾಂಡಿಗ ಮನ್‌ದೀಪ್ ಸಿಂಗ್(97 ರನ್, 114 ಎಸೆತ, 6 ಬೌಂಡರಿ, 3 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ 44.4 ಓವರ್‌ಗಳಲ್ಲಿ 230 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನ್ನು ಕಳೆದುಕೊಂಡಿತು. 73 ರನ್‌ಗಳಿಂದ ಸೋಲೊಪ್ಪಿಕೊಂಡಿತು.

 ತಮಿಳುನಾಡಿನ ಆರ್.ಎಸ್. ಶಾ(3-37) ಹಾಗೂ ಸಾಯಿ ಕಿಶೋರ್(3-39) ತಲಾ ಮೂರು ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ ‘ಬ್ಲೂ’ ಪರವಾಗಿ ಕ್ರನಾಲ್ ಪಾಂಡ್ಯ(36), ದೀಪಕ್ ಹೂಡ(26) ಹಾಗೂ ಅಂಬಟಿ ರಾಯುಡು(21) ಒಂದಷ್ಟು ಹೋರಾಟ ನೀಡಿದರು.

ಸಂಕ್ಷಿಪ್ತ ಸ್ಕೋರ್

ತಮಿಳುನಾಡು: 50 ಓವರ್‌ಗಳಲ್ಲಿ 303/6

(ದಿನೇಶ್ ಕಾರ್ತಿಕ್ 93, ಜಗದೀಶನ್ 71, ಇಂದ್ರಜಿತ್ ಅಜೇಯ 36, ಶಾರ್ದೂಲ್ ಠಾಕೂರ್ 3-49)

ಭಾರತ ‘ಬ್ಲೂ’: 44.4 ಓವರ್‌ಗಳಲ್ಲಿ 230 ರನ್‌ಗೆ ಆಲೌಟ್

(ಮನ್‌ದೀಪ್ ಸಿಂಗ್ 97, ಕ್ರನಾಲ್ ಪಾಂಡ್ಯ 36, ದೀಪಕ್ ಹೂಡ 26, ಆರ್.ಎಸ್. ಶಾ 3-37, ಕಿಶೋರ್ 3-39)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News