ಮೊದಲ ಟ್ವೆಂಟಿ-20: ಪಾಕಿಸ್ತಾನಕ್ಕೆ ಸುಲಭ ಜಯ

Update: 2017-03-27 18:00 GMT

  ಬ್ರಿಡ್ಜ್‌ಟೌನ್, ಮಾ.27: ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಶಾದಾಬ್ ಖಾನ್ ನೆರವಿನಿಂದ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 111 ರನ್ ಗಳಿಸಿತು. ಗೆಲ್ಲಲು ಸುಲಭ ಸವಾಲು ಪಡೆದಿದ್ದ ಪಾಕಿಸ್ತಾನ 17 ಎಸೆತಗಳು ಬಾಕಿ ಇರುವಾಗಲೇ 115 ರನ್ ಗಳಿಸಿ ಗೆಲುವಿನ ದಡ ಸೇರಿತು.

ನಾಲ್ಕನೆ ವಿಕೆಟ್‌ಗೆ 46 ರನ್ ಜೊತೆಯಾಟ ನಡೆಸಿದ ಶುಐಬ್ ಮಲಿಕ್(ಅಜೇಯ 38) ಹಾಗೂ ಬಾಬರ್ ಆಝಂ(29) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಾಕ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕಮ್ರಾನ್ ಅಕ್ಮಲ್ 22, ಶೆಹಝಾದ್ 13 ರನ್ ಕೊಡುಗೆ ನೀಡಿದರು.

18ರ ಹರೆಯದ ಶಾದಾಬ್ ಲೆಗ್ ಬ್ರೇಕ್ ಹಾಗೂ ಗೂಗ್ಲಿ ಮಿಶ್ರಣದೊಂದಿಗೆ ಅತ್ಯುತ್ತಮ ಬೌಲಿಂಗ್ ಮಾಡಿದ್ದು ಕೇವಲ 7 ರನ್ ನೀಡಿ ಮೂರು ವಿಕೆಟ್ ಗಳನ್ನು ಕಬಳಿಸಿದರು. ಇದು ಟ್ವೆಂಟಿ-20 ಕ್ರಿಕೆಟ್ ಚರಿತ್ರೆಯಲ್ಲಿ 4 ಓವರ್ ಸ್ಪೆಲ್‌ನಲ್ಲಿ ಬೌಲರ್‌ವೊಬ್ಬನ ಅತ್ಯಂತ ಮಿತವ್ಯಯಿ ಬೌಲಿಂಗ್ ಎನಿಸಿಕೊಂಡಿದೆ.

‘‘ಈವರ್ಷದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ತಾನು ನೀಡಿದ್ದ ಪ್ರದರ್ಶನದಿಂದ ಆತ್ಮವಿಶ್ವಾಸ ಪಡೆದುಕೊಂಡಿದ್ದೆ. ಇದೇ ಪ್ರದರ್ಶನ ಮುಂದುವರಿಸಿ ಪಾಕಿಸ್ತಾನದ ಗೆಲುವಿಗೆ ಇನ್ನಷ್ಟು ಮುಖ್ಯ ಕಾಣಿಕೆ ನೀಡುವ ವಿಶ್ವಾಸದಲ್ಲಿದ್ದೇನೆ’’ ಎಂದು ಪಂದ್ಯಶ್ರೇಷ್ಠ ಶದಾಬ್ ಖಾನ್ ಪ್ರತಿಕ್ರಿಯಿಸಿದರು.

ವಿಂಡೀಸ್ ನಾಯಕ ಕಾರ್ಲಸ್ ಬ್ರಾತ್‌ವೇಟ್(ಅಜೇಯ 34) ಜೇಸನ್ ಹೋಲ್ಡರ್‌ರೊಂದಿಗೆ 8ನೆ ವಿಕೆಟ್‌ಗೆ 37 ರನ್ ಸೇರಿಸಿ ತಂಡದ ಮೊತ್ತವನ್ನು 111ಕ್ಕೆ ತಲುಪಿಸಿದರು. ಶಾದಾಬ್ ತನ್ನ ಮೊದಲ ಓವರ್‌ನಲ್ಲಿ ಚಾಡ್ವಿಕ್ ವಾಲ್ಟನ್ ಹಾಗೂ ಲೆಂಡ್ಲ್ ಸಿಮೊನ್ಸ್‌ರನ್ನು ಹಾಗೂ 2ನೆ ಓವರ್‌ನಲ್ಲಿ ಸುನೀಲ್ ನರೇನ್ ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 111/8

(ಬ್ರಾತ್‌ವೇಟ್ ಅಜೇಯ 34, ವಾಲ್ಟನ್ 18, ಶದಾಬ್ ಖಾನ್ 3-7)

ಪಾಕಿಸ್ತಾನ: 17.1 ಓವರ್‌ಗಳಲ್ಲಿ 115/4

(ಶುಐಬ್ ಮಲಿಕ್ ಅಜೇಯ 38, ಬಾಬರ್ ಆಝಂ 29, ಕಮ್ರಾನ್ ಅಕ್ಮಲ್ 22, ಹೋಲ್ಡರ್ 2-27)

ಪಂದ್ಯಶ್ರೇಷ್ಠ: ಶದಾಬ್ ಖಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News