ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ನಿವೃತ್ತಿ

Update: 2017-03-27 18:01 GMT

ಸಿಡ್ನಿ, ಮಾ.27: ಆಸ್ಟ್ರೇಲಿಯದ ವೇಗದ ಬೌಲರ್ ಶಾನ್ ಟೇಟ್ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಟೇಟ್ ತನ್ನ ಅಸಾಮಾನ್ಯ ಸ್ಲಿಂಗ್ ಶೈಲಿಯ ಬೌಲಿಂಗ್‌ನ ಮೂಲಕ ಗಮನ ಸೆಳೆದಿದ್ದರು.

ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಸೀಸ್‌ನ್ನು ಪ್ರತಿನಿಧಿಸಿರುವ ಟೇಟ್ 3 ಟೆಸ್ಟ್, 35 ಏಕದಿನ ಹಾಗೂ 21 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.

2010ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಒಂದು ಎಸೆತವನ್ನು ಗಂಟೆಗೆ 161.1 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಈ ಸಾಧನೆ ಮಾಡಿದ ವಿಶ್ವದ 2ನೆ ಬೌಲರ್ ಎನಿಸಿಕೊಂಡಿದ್ದರು.

ಪಾಕ್‌ನ ಶುಐಬ್ ಅಖ್ತರ್(161.4 ಕಿ.ಮೀ.) ವೇಗವಾಗಿ ಬೌಲಿಂಗ್ ಮಾಡಿರುವ ವಿಶ್ವದ ಮೊದಲ ಬೌಲರ್ ಆಗಿದ್ದಾರೆ. ದಕ್ಷಿಣ ಆಸ್ಟ್ರೇಲಿಯ ರಾಜ್ಯದ ಪರ 15 ವರ್ಷಗಳ ಕಾಲ ಆಡಿರುವ ಟೇಟ್ ಇಂಗ್ಲೆಂಡ್, ಭಾರತ, ಝಿಂಬಾಬ್ವೆ, ನ್ಯೂಝಿಲೆಂಡ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ವೃತ್ತಿಪರ ತಂಡಗಳಲ್ಲಿ ಆಡಿದ್ದರು.

2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ 23 ವಿಕೆಟ್‌ಗಳನ್ನು ಕಬಳಿಸಿದ್ದ ಟೇಟ್ ಆಸ್ಟ್ರೇಲಿಯ ವಿಶ್ವಕಪ್ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. 2007ರ ವಿಶ್ವಕಪ್‌ನಲ್ಲಿಯೇ ದಕ್ಷಿಣ ಆಫ್ರಿಕದ ವಿರುದ್ಧ ಜೀವನಶ್ರೇಷ್ಠ ಬೌಲಿಂಗ್(4-39) ಮಾಡಿದ್ದರು. ‘‘ಇಂಗ್ಲೆಂಡ್‌ನಲ್ಲಿ ಅಥವಾ ಆಸ್ಟ್ರೇಲಿಯದಲ್ಲಿ ಇನ್ನು ಕೆಲವು ವರ್ಷ ಆಡಬೇಕೆಂಬ ಬಯಕೆಯಿತ್ತು. ಮಣಿಕಟ್ಟು ನೋವಿನಿಂದ ನನಗೆ ಇದು ಸಾಧ್ಯವಾಗುತ್ತಿಲ್ಲ. ನನಗೀಗ 34 ವರ್ಷ. ನನಗೆ ನಿರೀಕ್ಷಿತ ಪ್ರದರ್ಶನ ನೀಡಲು ಕಷ್ಟವಾಗುತ್ತಿದೆ’’ ಎಂದು ಟೇಟ್ ಹೇಳಿದ್ದಾರೆ.

2005ರ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ಟೇಟ್ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಪ್ರಭಾವಿ ಬೌಲರ್ ಆಗಿದ್ದ ಅವರು 23.56ರ ಸರಾಸರಿಯಲ್ಲಿ ಒಟ್ಟು 62 ವಿಕೆಟ್‌ಗಳನ್ನು ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News