ಫಿಫಾ ಅಂಡರ್-17 ವಿಶ್ವಕಪ್: ಕೋಲ್ಕತಾದಲ್ಲಿ ಫೈನಲ್

Update: 2017-03-27 18:08 GMT

ಕೋಲ್ಕತಾ, ಮಾ.27: ಮುಂಬರುವ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದ್ದು, ನವಿ ಮುಂಬೈ ಹಾಗೂ ಗುವಾಹಟಿ ಸೆಮಿ ಫೈನಲ್ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿವೆ. ಪ್ರತಿಷ್ಠಿತ ಫಿಫಾ ಟೂರ್ನಮೆಂಟ್ ಇದೇ ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿದೆ.

ಅಕ್ಟೋಬರ್ 6 ರಿಂದ 28ರ ತನಕ ನಡೆಯಲಿರುವ ಟೂರ್ನಮೆಂಟ್‌ಗೆ 85,000 ಪ್ರೇಕ್ಷಕರ ಸಾಮರ್ಥ್ಯದ ಕೋಲ್ಕತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಸಜ್ಜುಗೊಳಿಸಲಾಗಿದೆ. ‘ಎಫ್’ ಗುಂಪಿನ 6 ಪಂದ್ಯಗಳನ್ನು ಆತಿಥ್ಯವಹಿಸಲಿರುವ ಕೋಲ್ಕತಾದಲ್ಲಿ ಮೂರನೆ ಸ್ಥಾನಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯ, ಪ್ರಿ-ಕ್ವಾರ್ಟರ್ ಫೈನಲ್ ಹಾಗೂ ಕ್ವಾರ್ಟರ್ ಫೈನಲ್‌ನ ತಲಾ ಒಂದು ಪಂದ್ಯಗಳು ಇಲ್ಲಿ ನಡೆಯಲಿವೆ.

 ಎಂಟು ಸದಸ್ಯರನ್ನು ಒಳಗೊಂಡ ಫಿಫಾ ನಿಯೋಗ ಏಳು ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಟೂರ್ನಮೆಂಟ್‌ನ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಫಿಫಾ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘಟನಾ ಸಮಿತಿಯ ಸದಸ್ಯರುಗಳು ಆರು ನಗರಗಳಾದ-ಕೋಲ್ಕತಾ, ಹೊಸದಿಲ್ಲಿ, ಗುವಾಹಟಿ, ಮಾರ್ಗೊವಾ, ಕೊಚ್ಚಿ ಹಾಗೂ ನವಿ ಮುಂಬೈಗೆ ಭೇಟಿ ನೀಡಿವೆ.

 ಎರಡು ಸೆಮಿಫೈನಲ್‌ಗಳು ನವಿಮುಂಬೈನ ಡಿ.ವೈ. ಪಾಟೀಲ್ ಸ್ಟೇಡಿಯಂ ಹಾಗೂ ಗುವಾಹಟಿಯ ಇಂದಿರಾಗಾಂಧಿ ಅಥ್ಲೆಟಿಕ್ಸ್ ಸ್ಟೇಡಿಯಂಗಳಲ್ಲಿ ನಡೆಯಲಿವೆ. ಫಿಫಾ ತಂಡದಿಂದ ಶ್ಲಾಘನೆಗೆ ಒಳಗಾಗಿರುವ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗ್ರೂಪ್ ಎ ತಂಡಗಳ ತವರು ಮೈದಾನವಾಗಿದ್ದು, 16ನೆ ಸುತ್ತಿನ ಪಂದ್ಯಗಳು ನಡೆಯಲಿವೆ. ಗುವಾಹಟಿ ಇ ಗುಂಪಿನ ತವರು ಮೈದಾನವಾಗಿದ್ದು, 16ನೆ ಸುತ್ತಿನ ಒಂದು ಪಂದ್ಯ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿವೆ.

ಹೊಸದಿಲ್ಲಿಯಲ್ಲಿ ‘ಬಿ’ ಗುಂಪಿನ ಪಂದ್ಯಗಳು ನಡೆಯುತ್ತವೆ. ಮಾರ್ಗೊವಾದಲ್ಲಿ ‘ಸಿ’ ಗುಂಪಿನ ಪಂದ್ಯಗಳು ನಡೆಯಲಿದ್ದು, 16ನೆ ಸುತ್ತಿನ 2 ಪಂದ್ಯಗಳು ಹಾಗೂ ಒಂದು ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತದೆ. ಕಾಮಗಾರಿಯ ವಿಳಂಬದಲ್ಲಿ ಫಿಫಾ ನಿಯೋಗದಿಂದ ಅಸಮಾಧಾನಕ್ಕೆ ಒಳಗಾಗಿರುವ ಕೊಚ್ಚಿಯ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಡಿ ಗುಂಪಿನ ಪಂದ್ಯಗಳು ನಡೆಯಲಿದ್ದು, 16ರ ಸುತ್ತಿನ ಒಂದು ಪಂದ್ಯ ಹಾಗೂ ಒಂದು ಕ್ವಾರ್ಟರ್ ಫೈನಲ್ ಪಂದ್ಯವು ನಡೆಯುವುದು. ಜು.7 ರಂದು ಟೂರ್ನಿಯ ಡ್ರಾ ಪ್ರಕ್ರಿಯೆ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News