ಪುರುಷರ ಹಾಕಿ ವಿಶ್ವಕಪ್ 2018: ಭುವನೇಶ್ವರ ಆತಿಥ್ಯ

Update: 2017-03-27 18:05 GMT

 ಭುವನೇಶ್ವರ, ಮಾ.27: ಪುರುಷರ ಹಾಕಿ ವಿಶ್ವ ಲೀಗ್ ಫೈನಲ್ ಹಾಗೂ 2018ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿ ಭುವನೇಶ್ವರದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಹಾಗೂ ಒಡಿಶಾ ಸರಕಾರ ಸೋಮವಾರ ದೃಢಪಡಿಸಿವೆ.

ಕಳಿಂಗ ಸ್ಟೇಡಿಯಂ ಹಾಕಿಯ ಎರಡು ಪ್ರತಿಷ್ಠಿತ ಟೂರ್ನಿಗಳಾದ ವಿಶ್ವ ಲೀಗ್ ಹಾಗೂ ವಿಶ್ವಕಪ್‌ನ ಆತಿಥ್ಯವನ್ನು ವಹಿಸಿಕೊಂಡಿದೆ. ಇದೇ ತಾಣದಲ್ಲಿ 2014ರಲ್ಲಿ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ವಿಯಾಗಿ ನೆರವೇರಿತ್ತು. ಕಳಿಂಗ ಸ್ಟೇಡಿಯಂ ಹಾಕಿ ಇಂಡಿಯಾ ಲೀಗ್‌ನ ಹಾಲಿ ಚಾಂಪಿಯನ್ ಕಳಿಂಗ ಲ್ಯಾನ್ಸರ್ಸ್‌ನ ತವರು ಮೈದಾನವಾಗಿದೆ.

2017ರ ಪುರುಷರ ಹಾಕಿ ವಿಶ್ವ ಲೀಗ್ ಫೈನಲ್ ಡಿ.1 ರಿಂದ 10ರ ತನಕ ನಡೆಯಲಿದೆ. ಆತಿಥೇಯ ತಂಡವಲ್ಲದೆ ವಿಶ್ವ ಶ್ರೇಷ್ಠ 8 ತಂಡಗಳು ಭಾಗವಹಿಸಲಿವೆ. ಈ ತಂಡಗಳು ಹಾಕಿ ವಿಶ್ವ ಲೀಗ್‌ನ ಸೆಮಿಫೈನಲ್‌ನ ಮೂಲಕ ಫೈನಲ್‌ಗೆ ಅರ್ಹತೆ ಪಡೆಯಲಿವೆ.

 2018ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯು ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿದ್ದು, ಆತಿಥೇಯ ಭಾರತವಲ್ಲದೆ ಇತರ 15 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಈ ಎಲ್ಲ ತಂಡಗಳು ಹಾಕಿ ವಿಶ್ವ ಲೀಗ್ ಸೆಮಿಫೈನಲ್ಸ್ ಹಾಗೂ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ ಎಂದು ಎಫ್‌ಐಎಚ್ ತಿಳಿಸಿದೆ.

ಎರಡು ಟೂರ್ನಿಗೆ ಒಡಿಶಾ ಸರಕಾರ ಶೀರ್ಷಿಕೆ ಪ್ರಾಯೋಜಕತ್ವ ನೀಡಲಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯ ಅಧಿಕೃತ ಶೀರ್ಷಿಕೆಯು ‘ಒಡಿಶಾ ಪುರುಷರ ಹಾಕಿ ಲೀಗ್ ಫೈನಲ್ ಭುವನೇಶ್ವರ 2017’ ಹಾಗೂ ‘ಒಡಿಶಾ ಹಾಕಿ ಪುರುಷರ ವಿಶ್ವಕಪ್ ಭುವನೇಶ್ವರ 2018’ ಎಂದು ಕರೆಯಲಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News