ಮಡೈರಾ ವಿಮಾನ ನಿಲ್ದಾಣಕ್ಕೆ ರೊನಾಲ್ಡೊ ಹೆಸರು
ಫುಂಚಲ್, ಮಾ.30: ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರ ತವರು ಪಟ್ಟಣ ಮಡೈರಾ ದ್ವೀಪದಲ್ಲಿರುವ ವಿಮಾನ ನಿಲ್ದಾಣಕ್ಕೆ ರೊನಾಲ್ಡೊರ ಹೆಸರಿಡಲಾಗಿದೆ.
ನಾಲ್ಕು ಬಾರಿ ವಿಶ್ವದ ಆಟಗಾರ ಪ್ರಶಸ್ತಿಯನ್ನು ಪಡೆದಿರುವ ರೊನಾಲ್ಡೊ ಫುಟ್ಬಾಲ್ ಕೌಶಲ ಹಾಗೂ ತನ್ನ ಆಕರ್ಷಕ ನೋಟದ ಮೂಲಕ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಆದರೆ, ವಿಮಾನ ನಿಲ್ದಾಣಕ್ಕೆ ರೊನಾಲ್ಡೊ ಹೆಸರಿಡುವ ಸಂದರ್ಭದಲ್ಲಿ ಅನಾವರಣಗೊಳಿಸಲಾದ ಕಂಚಿನ ಪುತ್ಥಳಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದೆ. ಇದು ರೊನಾಲ್ಡೊರ ಪ್ರತಿರೂಪದ ಪುತ್ಥಳಿಯೇ ಎಂಬ ಬಗ್ಗೆ ಅನುಮಾನವನ್ನು ಹುಟ್ಟುಹಾಕಿದೆ. ಹಲ್ಲುಕಿರಿದು ನಗುತ್ತಿರುವ ಹಾಗೂ ಉಬ್ಬು ಕಣ್ಣಿನ ಕಂಚಿನ ಪುತ್ಥಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಈ ಮೂರ್ತಿ ಎಲ್ಲರ ಮುಖದಲ್ಲೂ ನಗು ಮೂಡಿಸಿದೆ.
ರೊನಾಲ್ಡೊರ ಅಭಿಮಾನಿಗಳು ಪುತ್ಥಳಿಯ ಬಗ್ಗೆ ಪ್ರಶ್ನೆ ಎತ್ತಿದ್ದು, ಇದು ನಮ್ಮ ಹೀರೋ ರೊನಾಲ್ಡೊರ ಬದಲಿಗೆ ರಿಪಬ್ಲಿಕ್ ಆಫ್ ಐರ್ಲೆಂಡ್‌ನ ಮಾಜಿ ನಾಯಕ ನಿಯಾಲ್ ಕ್ವಿನ್‌ರನ್ನು ಹೋಲುತ್ತಿದೆ ಎಂದು ಹೇಳಿದ್ದಾರೆ.
ಮಡೈರಾ ದ್ವೀಪದಲ್ಲಿರುವ ವಿಮಾನ ನಿಲ್ದಾಣವನ್ನು ಕ್ರಿಸ್ಟಿಯಾನೊ ರೊನಾಲ್ಡೊ ಏರ್‌ಪೋರ್ಟ್ ಎಂದು ಮರು ನಾಮಕರಣಗೊಳಿಸಿದ ಕಾರ್ಯಕ್ರಮದಲ್ಲಿ 32ರ ಹರೆಯದ ರೊನಾಲ್ಡೊ, ಅವರ ಗೆಳತಿ ಜಾರ್ಜಿನಾ ರೊಡ್ರಿಗಝ್, ತಾಯಿ ಮರಿಯಾ ಅವರು ಉಪಸ್ಥಿತರಿದ್ದರು.
ಪೋರ್ಚುಗಲ್‌ನ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿಗಳು ಮಡೈರಾ ದ್ವೀಪಕ್ಕೆ ತೆರಳಿ ರೊನಾಲ್ಡೊರಿಗೆ ಶುಭಾಶಯ ಕೋರಿದರು. ಫುಂಚಾಲ್‌ನಲ್ಲಿ ರೊನಾಲ್ಡೊರ ಮ್ಯೂಸಿಯಂನ್ನು ಈಗಾಗಲೇ ಸ್ಥಾಪಿಸಲಾಗಿದೆ.
ಏರ್‌ಪೋರ್ಟ್‌ಗೆ ಫುಟ್ಬಾಲ್ ಆಟಗಾರನ ಹೆಸರಿಡುವುದು ಇದೇ ಮೊದಲಲ್ಲ. 2006ರಲ್ಲಿ ಮಾಜಿ ಮ್ಯಾಂಚೆಸ್ಟರ್ ಆಟಗಾರ ಜಾರ್ಜ್ ಬೆಸ್ಟ್ ಸ್ಮರಣಾರ್ಥ ಬೆಲ್‌ಫಾಸ್ಟ್ ಏರ್‌ಪೋರ್ಟ್‌ಗೆ ಜಾರ್ಜ್ ಬೆಸ್ಟ್ ಹೆಸರನ್ನು ಇಡಲಾಗಿತ್ತು.