×
Ad

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಕನ್ನಡಿಗ ರಾಹುಲ್ 11ನೆ ಸ್ಥಾನಕ್ಕೆ ಭಡ್ತಿ

Update: 2017-03-30 15:09 IST

  ದುಬೈ, ಮಾ.30: ಆಸ್ಟ್ರೇಲಿಯ ವಿರುದ್ಧ ಧರ್ಮಶಾಲಾದಲ್ಲಿ ನಡೆದಿದ್ದ ಸರಣಿ ನಿರ್ಣಾಯಕ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದ ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಐಸಿಸಿ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ 11ನೆ ಸ್ಥಾನಕ್ಕೆ ಭಡ್ತಿ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು.

 ಇಲ್ಲಿ ಗುರುವಾರ ಬಿಡುಗಡೆಯಾದ ರ್ಯಾಂಕಿಂಗ್‌ನಲ್ಲಿ 11 ಸ್ಥಾನ ಮೇಲಕ್ಕೇರಿದ ರಾಹುಲ್ 11ನೆ ಸ್ಥಾನ ಪಡೆದರು. ಆಸ್ಟ್ರೇಲಿಯ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು 57ನೆ ರ್ಯಾಂಕಿನಲ್ಲಿದ್ದರು. ಸರಣಿಯಲ್ಲಿ 64, 10, 90, 51, 67, 60 ಹಾಗೂ ಅಜೇಯ 51 ರನ್ ಗಳಿಸಿದ್ದ ಕರ್ನಾಟಕದ ಬ್ಯಾಟ್ಸ್‌ಮನ್ ರಾಹುಲ್ 46 ಸ್ಥಾನ ಭಡ್ತಿ ಪಡೆದಿದ್ದಾರೆ.

ರಾಹುಲ್ ಅವರು ಪ್ರಸ್ತುತ ಭಾರತದ ಮೂರನೆ ಗರಿಷ್ಠ ರ್ಯಾಂಕಿನ ಬ್ಯಾಟ್ಸ್‌ಮನ್ ಆಗಿದ್ದಾರೆ. ಚೇತೇಶ್ವರ ಪೂಜಾರ(4) ಹಾಗೂ ವಿರಾಟ್ ಕೊಹ್ಲಿ(5) ಅಗ್ರ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಸ್ಪಿನ್‌ದ್ವಯರಾದ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಅಗ್ರ ಎರಡು ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನಾಲ್ಕನೆ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ವೇಗದ ಬೌಲರ್ ಉಮೇಶ್ ಯಾದವ್ ಜೀವನಶ್ರೇಷ್ಠ 21ನೆ ಸ್ಥಾನಕ್ಕೇರಿದ್ದಾರೆ.

 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜ ಎರಡನೆ ಸ್ಥಾನಕ್ಕೇರಿ ಅಶ್ವಿನ್ ಸ್ಥಾನವನ್ನು ಆಕ್ರಮಿಸಿಕೊಂಡರು. ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ. ಧರ್ಮಶಾಲಾದಲ್ಲಿ 63 ರನ್ ಹಾಗೂ 4 ವಿಕೆಟ್‌ಗಳನ್ನು ಕಬಳಿಸಿದ್ದ ಜಡೇಜ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಕಿವೀಸ್‌ನ ಕೇನ್ ವಿಲಿಯಮ್ಸನ್‌ಗಿಂತ 61 ಅಂಕದಿಂದ ಮುಂದಿದ್ದಾರೆ. ಸ್ಮಿತ್ ಭಾರತ ವಿರುದ್ಧದ ಸರಣಿಗಿಂತ ಮೊದಲು ಕೊಹ್ಲಿಗಿಂತ 38 ಅಂಕ ಮುಂದಿದ್ದರು. ಸರಣಿಯಲ್ಲಿ 8 ಇನಿಂಗ್ಸ್‌ಗಳಲ್ಲಿ 499 ರನ್ ಗಳಿಸಿದ್ದ ಸ್ಮಿತ್ ಯಶಸ್ವಿ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News