×
Ad

ಅಂಧರ ಏಷ್ಯನ್ ಚೆಸ್: ಕರ್ನಾಟಕದ ಕಿಶನ್ ಗಂಗೊಳ್ಳಿ ಚಾಂಪಿಯನ್

Update: 2017-03-31 20:32 IST

ಮಣಿಪಾಲ, ಮಾ.31: ನಿರೀಕ್ಷೆಯಂತೆ ಸತತ ನಾಲ್ಕು ಬಾರಿಯ ಅಂಧರ ರಾಷ್ಟ್ರೀಯ 'ಎ' ಚೆಸ್ ಚಾಂಪಿಯನ್ ಕರ್ನಾಟಕದ ಕಿಶನ್ ಗಂಗೊಳ್ಳಿ ಅವರು ಮಣಿಪಾಲದಲ್ಲಿ ಇಂದು ಮುಕ್ತಾಯಗೊಂಡ ಅಂಧರ ಐಬಿಸಿಎ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಮಹಾರಾಷ್ಟ್ರದ ಆರ್ಯನ್ ಬಿ.ಜೋಶಿ ವಿರುದ್ಧದ ಎಂಟನೇ ಹಾಗೂ ಅಂತಿಮ ಸುತ್ತಿನ ಪಂದ್ಯವನ್ನು ಸಮಬಲದಲ್ಲಿ ಮುಕ್ತಾಯ ಗೊಳಿಸಿದ ಕಿಶನ್ ಗಂಗೊಳ್ಳಿ, ಗರಿಷ್ಠ ಎಂಟರಲ್ಲಿ 7 ಅಂಕಗಳನ್ನು ಸಂಗ್ರಹಿಸುವ ಮೂಲಕ ಅಗ್ರಸ್ಥಾನ ಪಡೆದು ಚಿನ್ನದ ಪದಕದೊಂದಿಗೆ 50,000ರೂ. ನಗದು ಹಾಗೂ ಮಿರುಗುವ ಟ್ರೋಫಿಯನ್ನು ಕೈಗೆತ್ತಿಕೊಂಡರು.

ನಿನ್ನೆ ತಮ್ಮೆಳಗಿನ ಪಂದ್ಯವನ್ನು ಡ್ರಾಗೊಳಿಸುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದ ಗುಜರಾತ್‌ನ ಮಕ್ವಾನ್ ಅಶ್ವಿನ್ ಕೆ. ಹಾಗೂ ಒರಿಸ್ಸಾದ ಸೌಂದರ್ಯ ಕುಮಾರ್ ಪ್ರಧಾನ್ ಅವರು ಇಂದು ಕ್ರಮವಾಗಿ ಕೃಷ್ಣ ಉಡುಪ ಹಾಗೂ ಸ್ವಪ್ನೀಲ್ ಶಾ ವಿರುದ್ಧದ ಅಂತಿಮ ಸುತ್ತಿನ ಪಂದ್ಯದಲ್ಲೂ ಡ್ರಾ ಸಾಧಿಸುವ ಮೂಲಕ ತಲಾ 6 ಅಂಕಗಳನ್ನು ಗಳಿಸಿ ಸಮಬಲದಲ್ಲಿ ಹೋರಾಟ ಮುಕ್ತಾಯಗೊಳಿಸಿದರು.

ಇವರಲ್ಲಿ ಅಶ್ವಿನ್ ಕೆ. ಅವರು ಉತ್ತಮ ಬಿಎಚ್ ಅಂಕದೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ, 40,000ರೂ. ನಗದು ಹಾಗೂ ಟ್ರೋಫಿ ಜಯಿಸಿದರೆ, ಸೌಂದರ್ಯ ಕುಮಾರ್ ಅವರು ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ, 30,000ರೂ. ನಗದು ಹಾಗೂ ಟ್ರೋಫಿಯನ್ನು ಗೆದ್ದುಕೊಂಡರು.
 ಮುಂಬಯಿಯ ಆರ್ಯನ್ ಬಿ.ಜೋಶಿ ಅವರು ಐದು ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು 20,000ರೂ.ನಗದು ಸ್ವೀಕರಿಸಿದರು. ಅಷ್ಟೇ ಅಂಕ ಗಳಿಸಿದರೂ ಐದನೇ ಸ್ಥಾನ ಪಡೆದ ಗುಜರಾತ್‌ನ ಸ್ವಪ್ನೀಲ್ ಶಾ ಅವರು 10,000ರೂ. ನಗದು ಬಹುಮಾನ ಸ್ವೀಕರಿಸಿದರು. ಶಿವಮೊಗ್ಗದ ಕೃಷ್ಣ ಉಡುಪ ಅವರು ಆರನೇ ಸ್ಥಾನ ಪಡೆದರು.

ಟೂರ್ನಿಯಲ್ಲಿ ಅತ್ಯಧಿಕ ಫಿಡೆ ರೇಟಿಂಗ್ (2010) ಪಡೆದ ಆಟಗಾರನೆನಿಸಿ ಆತ್ಮವಿಶ್ವಾಸದಿಂದಲೇ ಆಟ ಪ್ರಾರಂಭಿಸಿದ್ದ ಬಾಂಗ್ಲಾ ದೇಶದ ಹುಸೈನ್ ಎಜಾಝ್ ಅವರು ಕೊನೆಯ ನಾಲ್ಕು ಸುತ್ತಿನ ಪಂದ್ಯಗಳಲ್ಲಿ ನಿರಾಶಾದಾಯಕ ಫಲಿತಾಂಶ ಪಡೆದು ಐದು ಅಂಕಗಳೊಂದಿಗೆ ಏಳನೇಯವರಾಗಿ ಪಂದ್ಯವನ್ನು ಕೊನೆಗೊಳಿಸಿದರು.

ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿಯೇಷನ್ ವತಿಯಿಂದ ಮಣಿಪಾಲ ವಿವಿ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಹಾಲ್‌ನಲ್ಲಿ ಕಳೆದ ಹತ್ತುದಿನಗಳ ಕಾಲ ನಡೆದ ಈ ಟೂರ್ನಿ ಇಂದು ಕೊನೆಗೊಂಡಿತು.

ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು, ಕೆಎಂಸಿಯ ಡೀನ್ ಡಾ.ಪೂರ್ಣಿಮಾ ಬಾಳಿಗಾ, ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಐಬಿಸಿಎ ಉಪಾಧ್ಯಕ್ಷ ಡಾ.ಚಾರುದತ್ತ ಜಾಧವ್, ಖಜಾಂಚಿ ಸರ್ಗಿಯೊ ಹರಿನಂದನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

 ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಹಾಗೂ ಕೆಎಂಸಿಯ ವೈದ್ಯ ಡಾ.ಕೆ.ರಾಜಗೋಪಾಲ್ ಶೆಣೈ ಅತಿಥಿಗಳನ್ನು ಸ್ವಾಗತಿಸಿದರೆ, ಮಣಿಪಾಲ ವಿವಿ ಕ್ರೀಡಾ ಕೌನ್ಸಿಲ್‌ನ ಕಾರ್ಯದರ್ಶಿ ಡಾ.ವಿನೋದ ಸಿ.ನಾಯಕ್ ವಂದಿಸಿದರು. ಸುಗಂಧಿನಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News