×
Ad

ಭ್ರಷ್ಟಾಚಾರ ಪ್ರಕರಣ: ಸ್ವಿಸ್ ಅಧಿಕಾರಿಗಳಿಗೆ 1,300 ಪುಟಗಳ ವರದಿ ಸಲ್ಲಿಸಿದ ಫಿಫಾ

Update: 2017-03-31 23:38 IST

ಲಾಸನ್, ಮಾ.31: ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಸ್ವಿಸ್ ಅಧಿಕಾರಿಗಳಿಗೆ 1,300 ಪುಟದ ಆಂತರಿಕ ವರದಿಯನ್ನು ಕಳುಹಿಸಿಕೊಟ್ಟಿದ್ದು, ತನಿಖೆಯಲ್ಲಿ ಭಾಗಿಯಾಗಿರುವ ಅಮೆರಿಕದ ಅಧಿಕಾರಿಗಳೊಂದಿಗೆ ಕೆಲವು ವಿಚಾರವನ್ನು ಹಂಚಿಕೊಳ್ಳಲಾಗಿದೆ ಎಂದು ಫಿಫಾ ಶುಕ್ರವಾರ ತಿಳಿಸಿದೆ.

ಫಿಫಾ ನೀಡಿರುವ ವರದಿಯಲ್ಲಿ ಇ-ಮೇಲ್‌ಗಳು, ಸಂಪರ್ಕ ಸಂಖ್ಯೆಗಳು ಒಳಗೊಂಡಿದ್ದು, ಇವು ಅಧಿಕಾರಿಗಳಿಗೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ವಿಸ್ ಪೊಲೀಸರು ಝೂರಿಕ್‌ನ ಹೊಟೇಲ್ ಮೇಲೆ ದಾಳಿ ನಡೆಸಿ ಏಳು ಫುಟ್ಬಾಲ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಬಂಧಿಸುವ ಮೂಲಕ ಫುಟ್ಬಾಲ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವನ್ನು ಬೆಳಕಿಗೆ ಬಂದಿತ್ತು. ದಾಳಿ ನಡೆದ ಒಂದು ತಿಂಗಳ ಬಳಿಕ 2015ರ ಜೂನ್‌ನಲ್ಲಿ ಫಿಫಾ ತನಿಖೆ ಆರಂಭಿಸಿತ್ತು.

ಇತ್ತೀಚೆಗಷ್ಟೇ ಪೂರ್ಣಗೊಂಡಿರುವ ಫಿಫಾ ವರದಿಯಲ್ಲಿ 2.5 ಮಿಲಿಯನ್ ದಾಖಲೆಗಳು, ಮುಖ್ಯ ಸಾಕ್ಷಿಗಳ ಸಂದರ್ಶನ ಒಳಗೊಂಡಿದ್ದು ಸ್ವಿಸ್ ಹಾಗೂ ಅಮೆರಿಕ ಅಧಿಕಾರಿಗಳ ಪ್ರಾಥಮಿಕ ಕಾಳಜಿಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

40 ಮಂದಿ ಫುಟ್ಬಾಲ್ ಹಾಗೂ ಕ್ರೀಡಾ ಮಾರುಕಟ್ಟೆ ಕಾರ್ಯನಿರ್ವಾಹಕರು ಲಂಚ ಹಾಗೂ ಕಿಕ್‌ಬ್ಯಾಕ್ ಮೂಲಕ 10 ಮಿಲಿಯನ್ ಡಾಲರ್‌ಗಳನ್ನು ಸ್ವೀಕರಿಸಿದ್ದಾರೆಂದು ನ್ಯೂಯಾರ್ಕ್‌ನಲ್ಲಿರುವ ಅಮೆರಿಕದ ಪ್ರಾಸಿಕ್ಯೂಟರ್ ಬೆಟ್ಟು ಮಾಡಿದೆ.

ಫಿಫಾದ ಮಾಜಿ ಉಚ್ಚಾಟಿತ ಅಧ್ಯಕ್ಷ ಸೆಪ್ ಬ್ಲಾಟರ್ ವಿರುದ್ಧ ತನಿಖೆ ನಡೆಸಲಾಗುತ್ತಿದ್ದು, ಸ್ವಿಸ್ ಅಟಾರ್ನಿ ಜನರಲ್ ಅವರು ಬ್ಲಾಟರ್ ವಿರುದ್ಧ ಅಧಿಕಾರ ದುರುಪಯೋಗದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಫಿಫಾದಲ್ಲಿ ಕಂಡುಬಂದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಬ್ಲಾಟರ್ ಹಾಗೂ ಅವರ ಮಾಜಿ ಆಪ್ತ ಮೈಕಲ್ ಪ್ಲಾಟಿನಿಯವರನ್ನು ಫುಟ್ಬಾಲ್‌ನಿಂದ ಆರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News