×
Ad

ಪಾಕ್ ಆಹ್ವಾನವನ್ನು ತಿರಸ್ಕರಿಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ

Update: 2017-03-31 23:42 IST

ಢಾಕಾ, ಮಾ.31: ಈ ವರ್ಷದ ಜುಲೈನಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನೀಡಿದ್ದ ಆಹ್ವಾನವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ.

ದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ್ನು ಮರಳಿ ತರುವ ಪ್ರಯತ್ನವಾಗಿ ಪಿಸಿಬಿ ಪಾಕ್‌ನಲ್ಲಿ ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯನ್ನಾಡಲು ಬಾಂಗ್ಲಾದೇಶಕ್ಕೆ ಆಹ್ವಾನ ನೀಡಿತ್ತು.

ಪಾಕಿಸ್ತಾನ ಈ ವರ್ಷದ ಜುಲೈನಲ್ಲಿ ಬಾಂಗ್ಲಾದೇಶಕ್ಕೆ ಪ್ರವಾಶ ಕೈಗೊಳ್ಳಲಿದೆ. ಅದಕ್ಕೂ ಮೊದಲು ಬಾಂಗ್ಲಾಕ್ಕೆ ಪಾಕ್ ಪ್ರವಾಸಕೈಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಸರಣಿಯಲ್ಲಿ ಬರುವ ಆದಾಯದಲ್ಲಿ ಸಮಾನ ಪಾಲು ಪಡೆಯುವಂತೆಯೂ ಹೇಳಿತ್ತು. ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸುರಕ್ಷಿತವಾಗಿದೆ ಎಂದು ಸಾಬೀತುಪಡಿಸಲು ಪಿಸಿಬಿ ಈ ತಿಂಗಳಾರಂಭದಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಪಂದ್ಯದ ಆತಿಥ್ಯವಹಿಸಿಕೊಂಡಿತ್ತು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಪ್ರತಿನಿಧಿ ಮಾ.5 ರಂದು ಲಾಹೋರ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಹಾಜರಾಗಿದ್ದರು.

ಭದ್ರತಾ ವ್ಯವಸ್ಥೆ ಇನ್ನೂ ಸಾಕಷ್ಟು ಪ್ರಮಾಣದಲ್ಲಿರದ ಕಾರಣ ಬಿಸಿಬಿಯು ಪಿಸಿಬಿ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದೆ.

ಕಳೆದ ತಿಂಗಳು ಪಿಎಸ್‌ಎಸ್ ಟಿ-20 ಫೈನಲ್ ಪಂದ್ಯದ ವೇಳೆ ಬಿಸಿಬಿಯ ಭದ್ರತಾ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ತಂಡ ನೀಡಿರುವ ವರದಿ ತೃಪ್ತಿದಾಯಕವಾಗಿಲ್ಲ. ಐಸಿಸಿ ತಂಡವೂ ಪಾಕ್‌ಗೆ ಭೇಟಿ ನೀಡಿದ್ದು, ಆ ತಂಡವೂ ತೃಪ್ತಿ ವ್ಯಕ್ತಪಡಿಸಿಲ್ಲ ಎಂದು ಬಿಸಿಬಿ ಮಾಧ್ಯಮ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಜಲಾಲ್ ಯೂನಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News