ಇಂಡಿಯನ್ ಓಪನ್; ಸಿಂಧು ಫೈನಲ್‌ಗೆ
ಹೊಸದಿಲ್ಲಿ, ಎ.1: ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಶನಿವಾರ ಫೈನಲ್ ತಲುಪಿದ್ದಾರೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಸಿಂಧು ಅವರು ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯೂನ್‌ರನ್ನು 21-18, 14-21, 21-14 ಅಂತರದಲ್ಲಿ ಮಣಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.
ಫೈನಲ್‌ನಲ್ಲಿ ಸಿಂಧು ಅವರು ಸ್ಪೇನ್‌ನ ಕರೋಲಿನಾ ಮರೀನ್‌ರನ್ನು ಎದುರಿಸಲಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಮರೀನ್ ವಿರುದ್ಧ ಸಿಂಧು ಸೋಲು ಅನುಭವಿಸಿದ್ದರು. ಇದೀಗ ಮತ್ತೆ ಇವರ ನಡುವೆ ಪ್ರಶಸ್ತಿಯ ಸುತ್ತಿನಲ್ಲಿ ಹಣಾಹಣಿ ನಡೆಯಲಿದೆ.
ಸೆಮಿಫೈನಲ್‌ನಲ್ಲಿ ಸಿಂಧು ಮತ್ತು ಸಂಗ್ ಜಿ ಹ್ಯೂನ್ ನಡುವೆ 1 ಗಂಟೆ 16 ನಿಮಿಷಗಳ ಕಾಲ ಹಣಾಹಣಿ ನಡೆಯಿತು. ಮೊದಲ ಸೆಟ್‌ನಲ್ಲಿ ಸಿಂಧು 21-18 ಅಂತರದಲ್ಲಿ ಮುನ್ನಡೆ ಸಾಧಿಸಿ ಫೈನಲ್ ತಲುಪುವ ಭರವಸೆ ಮೂಡಿಸಿದ್ದರು.
ಎರಡನೆ ಸೆಟ್‌ನಲ್ಲಿ ಸಂಗ್ ಜಿ ತಿರುಗೇಟು ನೀಡಿದರು. 21-14 ಅಂತರದಲ್ಲಿ ಸಿಂಧು ಅವರನ್ನು ಹಿಂದಿಕ್ಕಿದರು. ಆದರೆ ಮೂರನೆ ಸೆಟ್‌ನಲ್ಲಿ ಸಿಂಧು ಮತ್ತೆ ಮೇಲುಗೈ ಸಾಧಿಸುವ ಮೂಲಕ ಸಂಗ್ ಜಿ ಅವರನ್ನು ಕೂಟದಿಂದ ಹೊರದಬ್ಬಿದರು. ಸಿಂಧು ಮೊದಲ ಬಾರಿ ಇಂಡಿಯನ್ ಓಪನ್ ಸಿರೀಸ್‌ನಲ್ಲಿ ಫೈನಲ್ ತಲುಪಿದರು.
ಮಾಜಿ ನಂ.1ಆಟಗಾರ್ತಿ ಸಿಂಧು ಮೊದಲ ಗೇಮ್‌ನಲ್ಲಿ 3-6 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದರು. ಬಳಿಕ ಚೇತರಿಸಿಕೊಂಡು 9-7 ಅಂತರದಲ್ಲಿ ಸಂಗ್ ಜಿ ಹ್ಯೂನ್ ವಿರುದ್ಧ ಮೇಲುಗೈ ಸಾಧಿಸಿದರು. 24 ನಿಮಿಷದಲ್ಲಿ ಮೊದಲ ಗೇಮ್ ಜಯಿಸಿದರು. ಸಿಂಧು ಅವರು ಸಂಗ್ ಜಿ ವಿರುದ್ಧ ಜಯ ಗಳಿಸಿ ತನ್ನ ಗೆಲುವಿನ ದಾಖಲೆಯನ್ನು 7ಕ್ಕೆ ಏರಿಸಿದರು. ಒಟ್ಟು 11 ಬಾರಿ ಇವರ ನಡುವೆ ಹಣಾಹಣಿ ನಡೆದಿತ್ತು. 4 ಬಾರಿ ಸಂಗ್ ಜಿ ಹ್ಯೂನ್ ವಿರುದ್ಧ ಸಿಂಧು ಸೋಲು ಅನುಭವಿಸಿದ್ದರು. ಕೊನೆಯ ಬಾರಿ ಸಿಂಧು 2016ಡಿಸೆಂಬರ್‌ನಲ್ಲಿ ದುಬೈ ವರ್ಲ್ಡ್ ಸೂಪರ್ ಸಿರೀಸ್ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಆ ಬಳಿಕ ಸಂಗ್ ಜಿ ಹ್ಯೂನ್‌ರನ್ನು ಮೊದಲ ಬಾರಿ ಎದುರಿಸಿ ಸಿಂಧು ಸೇಡು ತೀರಿಸಿಕೊಂಡಿದ್ದಾರೆ.
ಫೈನಲ್‌ನಲ್ಲಿ ಸಿಂಧುಗೆ ಎದುರಾಳಿಯಾಗಿರುವ ಮರೀನ್ ವಿರುದ್ಧ ಸಿಂಧು ಆಡಿರುವ 8 ಪಂದ್ಯಗಳ ಪೈಕಿ ಸಿಂಧು ಕೇವಲ 3 ಬಾರಿ ಜಯ ಸಾಧಿಸಿದ್ದರು. ಈ ಕಾರಣದಿಂದಾಗಿ ಇವರ ನಡುವಿನ ಫೈನಲ್ ಪಂದ್ಯ ಕುತೂಹಲ ಕೆರಳಿಸಿದೆ. ಸಿಂಧು ರಿಯೋ ಒಲಿಂಪಿಕ್ಸ್ ಫೈನಲ್‌ನಲ್ಲಿ ಮರೀನ್ ವಿರುದ್ಧ ಸೋತು ಬೆಳ್ಳಿ ಜಯಿಸಿದ್ದರು. ಆ ಬಳಿಕ ದುಬೈನಲ್ಲಿ ನೇರ ಸೆಟ್‌ಗಳಿಂದ ಮರೀನ್‌ಗೆ ಸಿಂಧು ಸೋಲುಣಿಸಿದ್ದರು.
ಮರೀನ್ ಮತ್ತೊಂದು ಸೆಮಿಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಾಮಾಗುಚಿ ವಿರುದ್ಧ ಜ21-16, 21-14 ನೇರ ಸೆಟ್‌ಗಳಿಂದ ಜಯ ಗಳಿಸಿ ಫೈನಲ್ ತಲುಪಿದ್ದಾರೆ.
ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್‌ರನ್ನು ಸೋಲಿಸಿ ಸೆಮಿಪೈನಲ್ ತಲುಪಿದ್ದರು.
ದುಬೈ ಓಪನ್‌ನಲ್ಲಿ ಈ ಮೊದಲು ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಕೆ .ಶ್ರೀಕಾಂತ್ ಪ್ರಶಸ್ತಿ ಜಯಿಸಿದ್ದರು.
ಸಿಂಧು ಕಳೆದ ಜನವರಿಯಲ್ಲಿ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಗ್ರಾನ್ ಪ್ರಿ ಗೋಲ್ಡ್ ಗೆದ್ದುಕೊಂಡಿದ್ದರು. ಇದೀಗ ಇನ್ನೊಂದು ಪ್ರಶಸ್ತಿ ಜಯಿಸುವ ಅವಕಾಶ ಒದಗಿ ಬಂದಿದೆ. 2016ರ ನವೆಂಬರ್‌ನಲ್ಲಿ ಸಿಂಧು ಮೊದಲ ಬಾರಿ ಪ್ರತಿಷ್ಠಿತ ಚೀನಾ ಓಪನ್ ಸೂಪರ್‌ಸಿರೀಸ್ ಪ್ರೀಮಿಯರ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.