ಮುಸ್ಲಿಮರು ಭಯೋತ್ಪಾದನೆಯನ್ನು ಖಂಡಿಸುತ್ತಾರೆ ಎಂಬುದನ್ನು ದಾಖಲೆ ಸಹಿತ ಸಾಬೀತುಪಡಿಸಿದ ವಿದ್ಯಾರ್ಥಿನಿ

Update: 2017-04-01 15:33 GMT

 ವಾಶಿಂಗ್ಟನ್, ಎ. 1: ಮುಸ್ಲಿಮರು ಭಯೋತ್ಪಾದನೆಯನ್ನು ಯಾಕೆ ಖಂಡಿಸುವುದಿಲ್ಲ ಎಂಬುದಾಗಿ ಚರ್ಚೆಯ ವೇಳೆ ಸಹಪಾಠಿಯೊಬ್ಬರು 19 ವರ್ಷದ ಹೀರಾ ಹಶ್ಮಿ ಅವರನ್ನು ಕೇಳಿದರು. ಇದು ಮುಸ್ಲಿಮರಿಗೆ ಪದೇ ಪದೇ ಎದುರಾಗುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸಿ ಉತ್ತರಿಸಿ ಅವರು ಸುಸ್ತಾಗುತ್ತಾರೆ.

‘‘ ‘ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ’ ಎಂದು ನಾನು ಆ ವಿದ್ಯಾರ್ಥಿಗೆ ಹೇಳಿದೆ’’ ಎಂದು ‘ಹಿಂದೂಸ್ತಾನ್ ಟೈಮ್ಸ್’ಗೆ ನೀಡಿದ ಇಮೇಲ್ ಸಂದರ್ಶನವೊಂದರಲ್ಲಿ ಹೀರಾ ಹೇಳಿದ್ದಾರೆ.

‘‘ನಾವು ಖಂಡಿಸುತ್ತೇವೆ. ಆದರೆ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗಿದೆ. ಉಗ್ರವಾದಿಗಳ ಹಿಂಸಾ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಆದರೆ, ಜನರು ಅದನ್ನು ಕೇಳದಿದ್ದರೆ ಅದು ನಮ್ಮ ತಪ್ಪಲ್ಲ’’ ಎಂದು ಅವರು ಹೇಳುತ್ತಾರೆ.

ಆದಾಗ್ಯೂ, ಅವರ ಸಹಪಾಠಿಗೆ ಈ ಉತ್ತರದಿಂದ ತೃಪ್ತಿಯಾಗಲಿಲ್ಲ. ಹತಾಶೆಗೊಂಡ ಹೀರಾ ಮನೆಗೆ ಬಂದು ತನ್ನ ವಾದವನ್ನು ಪ್ರಭಾವಶಾಲಿಯಾಗಿ ಮಂಡಿಸುವುದು ಹೇಗೆ ಎಂಬ ಬಗ್ಗೆ ಯೋಚಿಸಿದರು.

ಅವರು 712 ಪುಟಗಳ ಗೂಗಲ್ ದಾಖಲೆಗಳನ್ನು ಸಿದ್ಧಪಡಿಸಿದರು. ಅದರಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಖಂಡಿಸಿ ಜಗತ್ತಿನಾದ್ಯಂತದ ಮುಸ್ಲಿಮರು ನೀಡಿರುವ 5,000 ಹೇಳಿಕೆಗಳಿವೆ.

ಬಿಹಾರದಲ್ಲಿ ಜನಿಸಿದ ಹೀರಾ ಬಾಲ್ಯದಲ್ಲೇ ಹೆತ್ತವರ ಜೊತೆಗೆ ಅಮೆರಿಕಕ್ಕೆ ವಲಸೆ ಹೋದರು. ಅವರು ಬೋಲ್ಡರ್‌ನಲ್ಲಿನ ಕೊಲರಾಡೊ ವಿಶ್ವವಿದ್ಯಾನಿಲಯದಲ್ಲಿ ಮೊಲಿಕ್ಯುಲರ್ ಬಯೋಲಜಿ ಅಧ್ಯಯನ ಮಾಡಿದರು.

ಇತ್ತೀಚಿನ ವೆಸ್ಟ್‌ಮಿನ್ಸ್‌ಟರ್ ಭಯೋತ್ಪಾದಕ ದಾಳಿಯನ್ನು ಲಂಡನ್ ಮೇಯರ್ ಸಾದಿಕ್ ಖಾನ್ ಖಂಡಿಸುವುದರಿಂದ ಹಿಡಿದು ಭಯೋತ್ಪಾದನೆಯನ್ನು ಖಂಡಿಸಿ ದೇವಬಂದ್ ವಿದ್ವಾಂಸರು ಮತ್ತು ನಟ ಶಾರುಖ್ ಖಾನ್ ನೀಡಿರುವ ಹೇಳಿಕೆಗಳನ್ನು ದಾಖಲೆ ಒಳಗೊಂಡಿದೆ.

ಈ ಬೃಹತ್ ದಾಖಲೆಯನ್ನು ಸಿದ್ಧಪಡಿಸಲು ಅವರು ಮೂರು ವಾರಗಳನ್ನು ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News