×
Ad

ಆಟಗಾರರ ವೇತನ ಹೆಚ್ಚಳ: ವಿರಾಟ್ ಕೊಹ್ಲಿ ಅಸಮಾಧಾನ

Update: 2017-04-03 23:51 IST

 ಮುಂಬೈ, ಎ.3: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಇತ್ತೀಚೆಗೆ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಪ್ರಕಟಿಸಿದ್ದು ಆಟಗಾರರ ಸಂಭಾವನೆಯನ್ನು ದುಪ್ಪಟ್ಟುಗೊಳಿಸಿತ್ತು. ಆದರೆ, ವಾರ್ಷಿಕ ರಿಟೇನರ್ ಶುಲ್ಕದಲ್ಲಿ ಇನ್ನಷ್ಟು ಹೆಚ್ಚಳ ಮಾಡಬೇಕೆಂದು ಭಾರತದ ನಾಯಕ ವಿರಾಟ್ ಕೊಹ್ಲಿ ಬೇಡಿಕೆ ಇಟ್ಟಿದ್ದಾರೆ.

ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿದ್ದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಎ ಶ್ರೇಣಿಯ ಆಟಗಾರರಿಗೆ 1 ಕೋ.ರೂ.ನಿಂದ 2 ಕೋ.ರೂ.ಗೆ, ಬಿ ಶ್ರೇಣಿಯ ಆಟಗಾರರಿಗೆ 50 ಲಕ್ಷ ರೂ.ನಿಂದ 1 ಕೋ.ರೂ.ಗೆ ಏರಿಸಲಾಗಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಬಿಸಿಸಿಐನ ವೇತನ ಹೆಚ್ಚಳದ ಬಗ್ಗೆ ಅತೃಪ್ತರಾಗಿದ್ದು, ಎ ಶ್ರೇಣಿಯ ಆಟಗಾರರಿಗೆ 5 ಕೋ.ರೂ., ಬಿ ಶ್ರೇಣಿಯ ಆಟಗಾರರಿಗೆ 3 ಕೋ.ರೂ. ಹಾಗೂ ಸಿ ಶ್ರೇಣಿಯ ಆಟಗಾರರಿಗೆ 1.5 ಕೋ.ರೂ. ಹೆಚ್ಚಳ ಮಾಡುವಂತೆ ಆಡಳಿತಾಧಿಕಾರಿಗಳ ಸಮಿತಿಗೆ(ಸಿಒಎ)ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

 ಬೇರೆ ದೇಶಗಳ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತದ ಆಟಗಾರರ ಸಂಭಾವನೆ ಕಡಿಮೆ ಇರುವುದು ಕೊಹ್ಲಿಯ ಬೇಡಿಕೆಗೆ ಮುಖ್ಯ ಕಾರಣವಾಗಿದೆ. ಬಿಸಿಸಿಐ ಇತ್ತೀಚೆಗೆ ಘೋಷಿಸಿರುವ ವೇತನ ಹೆಚ್ಚಳ ತಮ್ಮ ಬೇಡಿಕೆಯಷ್ಟಿಲ್ಲ ಎಂದು ಕೊಹ್ಲಿ ಹಾಗೂ ಇತರ ಆಟಗಾರರ ವಾದವಾಗಿದೆ ಎಂದು ಮೂಲಗಳು ತಿಳಿಸಿವೆ.

ಟೆಸ್ಟ್ ಹಾಗೂ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪ್ರತ್ಯೇಕ ವಾರ್ಷಿಕ ಗುತ್ತಿಗೆಯನ್ನು ಪ್ರಕಟಿಸಬೇಕೆಂದು ಆಟಗಾರರು ಬೇಡಿಕೆ ಇಟ್ಟಿದ್ದಾರೆ. ಎರಡು ಮಾದರಿಯ ಕ್ರಿಕೆಟ್‌ನಲ್ಲಿ ಎ ಶ್ರೇಣಿಯ ಆಟಗಾರರಿಗೆ 5 ಕೋ.ರೂ. ಸಂಭಾವನೆ ನೀಡಬೇಕೆಂದು ಕೊಹ್ಲಿ ಪಡೆಯ ಬೇಡಿಕೆಯಾಗಿದೆ.

 ಬಿಸಿಸಿಐನ ಮುಂದಿನ ಸಭೆಯಲ್ಲಿ ಆಡಳಿತಾಧಿಕಾರಿಗಳ ಸಮಿತಿ ಈ ವಿಷಯವನ್ನು ಪ್ರಸ್ತಾವಿಸುವ ಸಾಧ್ಯತೆಯಿದೆ.

ಕ್ರಿಕೆಟಿಗರ ಪರ ರವಿ ಶಾಸ್ತ್ರಿ ಬ್ಯಾಟಿಂಗ್

 ಮುಂಬೈ, ಎ.3: ತಮ್ಮ ಸಂಭಾವನೆಯಲ್ಲಿ ಮತ್ತಷ್ಟು ಏರಿಕೆ ಮಾಡಬೇಕೆಂದು ಭಾರತದ ಆಟಗಾರರ ಬೇಡಿಕೆಗೆ ಭಾರತದ ಮಾಜಿ ಆಲ್‌ರೌಂಡರ್ ರವಿ ಶಾಸ್ತ್ರಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಿಸಿಸಿಐ ಏರಿಸಿರುವ ಆಟಗಾರರ ಸಂಭಾವನೆಯು ಜುಜುಬಿ ಎಂದು ಟೀಕಿಸಿರುವ ಶಾಸ್ತ್ರಿ , ಆಟಗಾರರು ಪಡೆಯಲಿರುವ 2 ಕೋ.ರೂ. ಸಂಭಾವನೆೆ ಏನೇನೂ ಸಾಲದು. ಆಸ್ಟ್ರೇಲಿಯ ಕ್ರಿಕೆಟಿಗರು ಎಷ್ಟು ಸಂಭಾವನೆ ಪಡೆಯತ್ತಿದ್ದಾರೆ ಬಿಸಿಸಿಐಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

 ಈ ವರ್ಷದ ಐಪಿಎಲ್‌ನಲ್ಲಿ ಯಾವುದೇ ಫ್ರಾಂಚೈಸಿಯೊಂದಿಗೆ ಸಹಿ ಹಾಕದ ಚೇತೇಶ್ವರ ಪೂಜಾರನ್ನು ಬೆಟ್ಟು ಮಾಡಿದ ಶಾಸ್ತ್ರಿ, ಸೌರಾಷ್ಟ್ರ ಆಟಗಾರ ಈ ವರ್ಷದ ಟ್ವೆಂಟಿ-20 ಲೀಗ್‌ನಲ್ಲಿ ಆಡುತ್ತಿಲ್ಲ ಎಂಬ ಚಿಂತೆ ಕಾಡದಂತೆ ಬಿಸಿಸಿಐ ನಡೆದುಕೊಳ್ಳಬೇಕು. ಶ್ರೇಣೀಕೃತ ಟೆಸ್ಟ್ ಆಟಗಾರರ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸಲೇಬೇಕು. ಎ ಶ್ರೇಣಿಯಲ್ಲಿರುವ ಚೇತೇಶ್ವರ ಪೂಜಾರ ವೇತನವನ್ನು ಇನ್ನಷ್ಟು ಏರಿಸಬೇಕು. ಎ ಶ್ರೇಣಿಯ ಆಟಗಾರರ ಸಂಭಾವನೆಯಲ್ಲಿ ಭಾರೀ ಏರಿಕೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

 ಮಾ.22 ರಂದು ಬಿಸಿಸಿಐ ಏರಿಕೆ ಮಾಡಿರುವ ಪಂದ್ಯ ಶುಲ್ಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಟಗಾರರನ್ನು ಶಾಸ್ತ್ರಿ ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News