×
Ad

ಕ್ಲಬ್ ಪಂದ್ಯದಲ್ಲಿ 100ನೆ ಗೋಲು ಬಾರಿಸಿದ ನೇಮರ್

Update: 2017-04-03 23:55 IST

ಮ್ಯಾಡ್ರಿಡ್, ಎ.3: ಬ್ರೆಝಿಲ್‌ನ ಸ್ಟಾರ್ ಆಟಗಾರ ನೇಮರ್ ಫುಟ್ಬಾಲ್ ಕ್ಲಬ್ ಪಂದ್ಯದಲ್ಲಿ 100ನೆ ಗೋಲು ಬಾರಿಸಿ ಗಮನ ಸೆಳೆದಿದ್ದಾರೆ.

   ಬಾರ್ಸಿಲೋಗ ಲಾಲಿಗ ಫುಟ್ಬಾಲ್ ಟೂರ್ನಿಯಲ್ಲಿ ಗ್ರನಾಡಾ ತಂಡದ ವಿರುದ್ಧ 4-1 ಗೋಲುಗಳ ಅಂತರದಿಂದ ಜಯ ಸಾಧಿಸಿದ ಪಂದ್ಯದಲ್ಲಿ ನೇಮರ್ ಈ ಸಾಧನೆ ಮಾಡಿದ್ದಾರೆ. ನೇಮರ್ 90ನೆ ನಿಮಿಷದಲ್ಲಿ ತಂಡದ ಪರ 4ನೆ ಗೋಲು ಬಾರಿಸಿದರು. ಲೂಯಿಸ್ ಸುಯರೆಝ್(44ನೆ ನಿಮಿಷ), ಪಕೋ ಎಲ್ಕೆಸೆರ್(64 ನಿ.), ಇಯಾನ್ ರಾಕಿಟಿಕ್(83ನೆ ನಿ.)ತಲಾ ಒಂದು ಗೋಲು ಬಾರಿಸಿದರು. ಬಾರ್ಸಿಲೋನಾ ಲೀಗ್ ಅಂಕಪಟ್ಟಿಯಲ್ಲಿ 2ನೆ ಸ್ಥಾನದಲ್ಲಿ ಮುಂದುವರಿದಿದೆ. ಮೊದಲ ಸ್ಥಾನದಲ್ಲಿರುವ ರಿಯಲ್ ಮ್ಯಾಡ್ರಿಡ್‌ಗಿಂತ ಕೇವಲ 2 ಅಂಕದಿಂದ ಹಿಂದಿದೆ.

 ನೇಮರ್ 177ನೆ ಕ್ಲಬ್ ಪಂದ್ಯದಲ್ಲಿ 100ನೆ ಗೋಲು ಬಾರಿಸಿದರು. ಈ ಮೂಲಕ ಬಾರ್ಸಿಲೋನಾದ ಸಹ ಆಟಗಾರ ಲಿಯೊನೆಲ್ ಮೆಸ್ಸಿ(188 ಪಂದ್ಯ)ಗಿಂತ ವೇಗವಾಗಿ 100 ಗೋಲು ಬಾರಿಸಿದ್ದಾರೆ. ಲೂಯಿಸ್ ಸುಯರೆಝ್ ಕೇವಲ 120 ಪಂದ್ಯಗಳಲ್ಲಿ 100 ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ. ಮರಿಯಾನೊ ಮಾರ್ಟಿನ್(99 ಪಂದ್ಯ, 100 ಗೋಲು) ಕ್ಲಬ್ ಪಂದ್ಯದಲ್ಲಿ ವೇಗವಾಗಿ ಗೋಲು ಬಾರಿಸಿದ ಮೊದಲಿಗನಾಗಿದ್ದಾರೆ.

ಬಾರ್ಸಿಲೋನಾದ ಪರ ಒಟ್ಟು 18 ಆಟಗಾರರು 100 ಹಾಗೂ ಅದಕ್ಕಿಂತ ಹೆಚ್ಚು ಗೋಲು ಬಾರಿಸಿದ್ದಾರೆ.

ನೂರನೆ ಗೋಲು ಬಾರಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ನನಗೆ ಯಾವಾಗಲೂ ನೆರವು ನೀಡುವ ಸಹ ಆಟಗಾರರಿಗೆ ಈ ಸಾಧನೆಯನ್ನು ಸಮರ್ಪಿಸುವೆ. ತಂಡ ಗೆಲುವು ಸಾಧಿಸಿರುವುದಕ್ಕೆ ತುಂಬಾ ಖುಷಿಯಾಗಿದ್ದು, ಇದು ಅತ್ಯಂತ ಮುಖ್ಯವಾಗಿದೆ. ಸೂಪರ್ ಕಪ್‌ನಲ್ಲಿ ಬಾರಿಸಿದ ಗೋಲು ನನ್ನ ಶ್ರೇಷ್ಠ ಗೋಲಾಗಿದೆ ಎಂದು ನೇಮರ್ ಪ್ರತಿಕ್ರಿಯಿಸಿದರು.

 ನೇಮರ್ ಸ್ಯಾಂಟೊಸ್ ಹಾಗೂ ಬಾರ್ಸಿಲೋನಾದ ಪರ ಲಾಲಿಗ ಟೂರ್ನಿಯಲ್ಲಿ 64, ಚಾಂಪಿಯನ್ಸ್ ಲೀಗ್‌ನಲ್ಲಿ 21, ಕೋಪಾ ಡೆಲ್‌ರೇಯಲ್ಲಿ 14 ಹಾಗೂ ಸ್ಪಾನೀಶ್ ಸೂಪರ್‌ಕಪ್‌ನಲ್ಲಿ 1 ಗೋಲು ಬಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News