ಮರಾಠಿಗರ ಪೋಷಾಕಿನಲ್ಲಿ ಸ್ಟೀವ್ ಸ್ಮಿತ್ ಮಿಂಚು

Update: 2017-04-05 17:55 GMT

ಪುಣೆ, ಎ.5: ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಇತ್ತೀಚೆಗಿನ ದಿನಗಳಲ್ಲಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಆದರೆ, ಈ ಬಾರಿ ಅವರು ಭಾರತೀಯರ ಮನಮೆಚ್ಚುವ ಕೆಲಸ ಮಾಡಿದ್ದಾರೆ. 10ನೆ ಆವೃತ್ತಿಯ ಐಪಿಎಲ್‌ನಲ್ಲಿ ಪುಣೆ ಸೂಪರ್‌ಜೈಂಟ್ ನಾಯಕನಾಗಿರುವ ಸ್ಮಿತ್ ಮರಾಠಿ ಪೋಷಾಕನ್ನು ಧರಿಸಿ ಪುಣೇರಿ ಅವತಾರ’ದಲ್ಲಿ ಕಾಣಿಸಿಕೊಂಡಿದ್ದಾರೆ.

 ಇತ್ತೀಚೆಗೆ ಕೊನೆಗೊಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಆದರೆ,ವಿವಾದ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಕೆಲವು ವಿಷಯದಲ್ಲಿ ಮೈದಾನದ ಹೊರಗೆ ಹಾಗೂ ಒಳಗೆ ವಾಕ್ಸಮರ ನಡೆಸಿದ್ದರು. ಇದೀಗ ಮರಾಠಿ ಪೋಷಾಕಿನಲ್ಲಿ ಕಾಣಿಸಿಕೊಂಡು ಹಿಂದಿನ ಎಲ್ಲ ಕಹಿ ಘಟನೆಯನ್ನು ಮರೆಸುವ ಪ್ರಯತ್ನ ಮಾಡಿದ್ದಾರೆ.

ಸ್ಮಿತ್ ಹೊಸ ಅವತಾರದ ಬಗ್ಗೆ ಟ್ವೀಟ್‌ನಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ವಿಡಿಯೋದಲ್ಲಿ ‘ಅಪಲ್ಯಾ ಟೀಮ್ ಕಾ ಸಪೋರ್ಟ್ ಕರಾ(ನಮ್ಮ ತಂಡವನ್ನು ಬೆಂಬಲಿಸಿ)ಎಂದು ಮರಾಠಿಯಲ್ಲಿ ಸ್ಮಿತ್ ಹೇಳುವ ಮೂಲಕ ಪುಣೆಯ ನಾಗರಿಕರ ಮನಗೆಲ್ಲಲು ಯತ್ನಿಸಿದ್ದಾರೆ.

10ನೆ ಆವೃತ್ತಿಯ ಐಪಿಎಲ್ ಆರಂಭಕ್ಕೆ ಮೊದಲು ಪುಣೆ ತಂಡದ ನಾಯಕತ್ವವನ್ನು ಬದಲಿಸಲಾಗಿದ್ದು, ಎಂ.ಎಸ್. ಧೋನಿ ಬದಲಿಗೆ ಸ್ಮಿತ್‌ಗೆ ನಾಯಕತ್ವ ಜವಾಬ್ದಾರಿ ನೀಡಲಾಗಿದೆ. ಪುಣೆ ಫ್ರಾಂಚೈಸಿಯ ಸಂಪೂರ್ಣ ಬೆಂಬಲ ಪಡೆದಿರುವ ಸ್ಮಿತ್‌ಗೆ ಪುಣೆಯ ನಾಗರಿಕರ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News