ಶ್ರೀಲಂಕಾ-ಬಾಂಗ್ಲಾದೇಶ ಟ್ವೆಂಟಿ-20 ಸರಣಿ ಸಮಬಲ
ಕೊಲಂಬೊ, ಎ.6: ಲಸಿತ್ ಮಾಲಿಂಗರ ಹ್ಯಾಟ್ರಿಕ್ ವಿಕೆಟ್ ಹೊರತಾಗಿಯೂ ಆಲ್‌ರೌಂಡ್ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧದ 2ನೆ ಟ್ವೆಂಟಿ-20 ಪಂದ್ಯವನ್ನು 45 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ನಡೆದ 2ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿತು. ಮಾಲಿಂಗ 19ನೆ ಓವರ್‌ನ 3, 4 ಹಾಗೂ 5ನೆ ಎಸೆತದಲ್ಲಿ ಸತತ ವಿಕೆಟ್ ಕಬಳಿಸಿ ಹ್ಯಾಟ್ರಿಕ್ ಸಾಧಿಸಿದರು. ಬಾಂಗ್ಲಾದ ಪರ ಶಾಕಿಬ್ ಅಲ್‌ಹಸನ್(38) ಅಗ್ರ ಸ್ಕೋರ್ ಎನಿಸಿಕೊಂಡರು. ಇಮ್ರುಲ್ ಕಯಸ್(36) ಹಾಗೂ ಸೌಮ್ಯ ಸರ್ಕಾರ್(34) ಮೊದಲ ವಿಕೆಟ್‌ಗೆ 71 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.
ಗೆಲ್ಲಲು 177 ರನ್ ಸವಾಲು ಪಡೆದಿದ್ದ ಶ್ರೀಲಂಕಾ ತಂಡ 18ನೆ ಓವರ್‌ಗಳಲ್ಲಿ ಕೇವಲ 131 ರನ್‌ಗೆ ಆಲೌಟಾಯಿತು. ಹಸನ್(3-24)ಹಾಗೂ ಮುಸ್ತಫಿಝರ್ರಹ್ಮಾನ್(4-21) ಏಳು ವಿಕೆಟ್ ಹಂಚಿಕೊಂಡರು. ಶ್ರೀಲಂಕಾದ ಪರ ಕಪುಗಡೆರ(50) ಸರ್ವಾಧಿಕ ರನ್ ಬಾರಿಸಿದರು. ಹಸನ್ ಪಂದ್ಯಶ್ರೇಷ್ಠ, ಮಾಲಿಂಗ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.