×
Ad

ಐಪಿಎಲ್ ಹರಾಜಿನಲ್ಲಿ ಕಡೆಗಣಿಸಿದವರಿಗೆ ಬೌಲಿಂಗ್‌ನಲ್ಲಿ ಉತ್ತರ ನೀಡಿದ ತಾಹಿರ್

Update: 2017-04-07 15:07 IST

ಮುಂಬೈ, ಎ.7: ಕಳೆದ ಫೆಬ್ರವರಿಯಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಲ್ಲ 8 ಫ್ರಾಂಚೈಸಿಗಳಿಂದ ತಿರಸ್ಕರಿಸಲ್ಪಟ್ಟಿದ್ದ ದಕ್ಷಿಣ ಆಫ್ರಿಕದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ 10ನೆ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ತನ್ನ ತಾಕತ್ತನ್ನು ತೋರಿಸಿಕೊಟ್ಟಿದ್ದಾರೆ.

ಗುರುವಾರ ಇಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪುಣೆ ತಂಡವನ್ನು ಪ್ರತಿನಿಧಿಸಿದ್ದ 38ರ ಹರೆಯದ ತಾಹಿರ್ 3 ವಿಕೆಟ್‌ಗಳನ್ನು ಉಡಾಯಿಸಿ ಗಮನ ಸೆಳೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿದ್ದ ತಾಹಿರ್ ಆಟಗಾರರ ಹರಾಜಿನ ವೇಳೆ ಕಡೆಗಣಿಸಲ್ಪಟ್ಟಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

 ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಗಂಭೀರ ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರ ನಡೆದ ಹಿನ್ನೆಲೆಯಲ್ಲಿ ಪುಣೆ ಫ್ರಾಂಚೈಸಿ ತಾಹಿರ್‌ರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ತಾಹಿರ್ ಈ ಹಿಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

 ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಮುಂಬೈ ತಂಡ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿ ಭರ್ಜರಿ ಆರಂಭವನ್ನು ಪಡೆದಿತ್ತು. ಈ ವೇಳೆ ನಾಯಕ ಸ್ಟೀವನ್ ಸ್ಮಿತ್ ಅವರು ತಾಹಿರ್ ಕೈಗೆ ಚೆಂಡು ನೀಡಿದರು. ತಾನೆಸೆದ 2ನೆ ಎಸೆತದಲ್ಲಿ ಪಟೇಲ್ ವಿಕೆಟ್ ಉಡಾಯಿಸಿದರು. ಮುಂದಿನ ಓವರ್‌ನಲ್ಲಿ ಎದುರಾಳಿ ತಂಡದ ನಾಯಕ ರೋಹಿತ್ ಶರ್ಮ(3) ವಿಕೆಟ್ ಪಡೆದ ತಾಹಿರ್ ಆನಂತರ ಅಪಾಯಕಾರಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್(38)ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಆಗ ಮುಂಬೈ 62 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ ಪುಣೆ ಫ್ರಾಂಚೈಸಿಗೆ ಕೃತಜ್ಞತೆ ಸಲ್ಲಿಸಿದ ತಾಹಿರ್,‘‘ಐಪಿಎಲ್‌ನಲ್ಲಿ ಆಯ್ಕೆಯಾಗದೇ ಇರುವುದಕ್ಕೆ ನನಗೆ ತುಂಬಾ ಬೇಸರವಾಗಿತ್ತು. ಪುಣೆ ತಂಡ ಕೊನೆಗೂ ನನಗೆ ಅವಕಾಶ ನೀಡಿತು. ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ತಂಡಕ್ಕೆ ಜಯ ತಂದುಕೊಡಲು ಯತ್ನಿಸುವೆ’’ ಎಂದು ಹೇಳಿದ್ದಾರೆ.

ತಾಹಿರ್ ಬೌಲಿಂಗ್‌ಗೆ ಆರಂಭದಲ್ಲಿ ತತ್ತರಿಸಿದ್ದ ಮುಂಬೈ ತಂಡ ಅಶೋಕ್ ದಿಂಡಾ ಎಸೆದ ಅಂತಿಮ ಓವರ್‌ನಲ್ಲಿ 30 ರನ್ ಕಬಳಿಸಿ 8 ವಿಕೆಟ್‌ಗೆ 184 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ ಅವರು ದಿಂಡಾರನ್ನು ಚೆನ್ನಾಗಿ ದಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News