×
Ad

ಡೇವಿಸ್‌ಕಪ್: ಭಾರತಕ್ಕೆ 2-0 ಮುನ್ನಡೆ

Update: 2017-04-07 23:44 IST

 ಬೆಂಗಳೂರು, ಎ.7: ಡೇವಿಸ್‌ಕಪ್ ಏಷ್ಯಾ-ಒಶಿಯಾನಿಯ ಗ್ರೂಪ್-1ರ ಎರಡನೆ ಸುತ್ತಿನ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್ ಹಾಗೂ ಪ್ರಜ್ಞೇಶ್ ಗುಣೇಶ್ವರನ್ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ 267 ರ್ಯಾಂಕಿನ ಆಟಗಾರ ರಾಮ್‌ಕುಮಾರ್ ಅವರು ಎದುರಾಳಿ ಉಜ್ಬೇಕಿಸ್ತಾನದ ತೈಮುರ್ ಇಸ್ಮಾಯಿಲೊವ್‌ರನ್ನು 6-2, 5-7, 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.

ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಉಜ್ಬೇಕಿಸ್ತಾನದ ಸಂಜರ್ ಫೆಝೀವ್ ವಿರುದ್ಧ 3-1, 7-5, 3-6, 6-3, 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಯೂಕಿ ಭಾಂಬ್ರಿ ಬದಲಿಗೆ ಡೇವಿಸ್ ಕಪ್‌ನಲ್ಲಿ ಮೊತ್ತ ಮೊದಲ ಬಾರಿ ಸಿಂಗಲ್ಸ್ ವಿಭಾಗದಲ್ಲಿ ಆಡುವ ಅವಕಾಶ ಪಡೆದ ಗುಣೇಶ್ವರನ್ ಐದು ಸೆಟ್‌ಗಳ ಪಂದ್ಯದಲ್ಲಿ 3 ಸೆಟ್‌ನಲ್ಲಿ ಮೇಲುಗೈ ಸಾಧಿಸಿದರು.

406ನೆ ರ್ಯಾಂಕಿನ ಆಟಗಾರ ತೈಮುರ್ ಆಟದ ವೇಳೆ ಬಲ ಸ್ನಾಯು ಸೆಳೆತಕ್ಕೆ ಒಳಗಾದರೂ ರಾಮ್‌ಕುಮಾರ್‌ಗೆ ತೀವ್ರ ಪೈಪೋಟಿ ನೀಡಿದರು.

ರಾಮ್‌ಕುಮಾರ್ ಮೊದಲ ಸೆಟ್‌ನ್ನು 6-2 ಅಂತರದಿಂದ ಜಯಿಸಿ ಶುಭಾರಂಭ ಮಾಡಿದರು. 2ನೆ ಸೆಟ್‌ನ್ನು 7-5 ರಿಂದ ಜಯಿಸಿದ ತೈಮುರ್ ತಿರುಗೇಟು ನೀಡಿದರು. ತೈಮುರ್‌ಗೆ ಮೂರನೆ ಸೆಟ್‌ನಲ್ಲಿ ಆಡುತ್ತಿದ್ದಾಗ ಬಲಗಾಲಿನಲ್ಲಿ ನೋವುಕಾಣಿಸಿಕೊಂಡಿತು. ತೈಮುರ್ ಗಾಯಗೊಂಡಿರುವುದರ ಲಾಭ ಪಡೆದ ರಾಮ್‌ಕುಮಾರ್ 3 ಹಾಗೂ 4ನೆ ಸೆಟ್‌ನ್ನು ಕ್ರಮವಾಗಿ 6-2, 7-5 ಅಂತರದಿಂದ ಗೆದ್ದುಕೊಂಡು ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಡೇವಿಸ್‌ಕಪ್‌ನ ಎರಡನೆ ಸುತ್ತಿನ ಪಂದ್ಯವನ್ನು ಜಯಿಸುವ ತಂಡ ವರ್ಲ್ಡ್ ಗ್ರೂಪ್ ಪ್ಲೇ-ಆಪ್‌ಗೆ ತೇರ್ಗಡೆಯಾಗುತ್ತದೆ. ಪ್ಲೇ-ಆಫ್ ಪಂದ್ಯ ಸೆಪ್ಟಂಬರ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News