ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯೂನಿಸ್ ಖಾನ್ ವಿದಾಯ
ಕರಾಚಿ, ಎ.8: ಪಾಕಿಸ್ತಾನದ ಹಿರಿಯ ಬ್ಯಾಟ್ಸ್‌ಮನ್ ಹಾಗೂ ಮಾಜಿ ನಾಯಕ ಯೂನಿಸ್ ಖಾನ್ ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಶನಿವಾರ ಘೋಷಿಸಿದ್ದಾರೆ.
‘‘ನಾನು ಹೆಮ್ಮೆಯಿಂದ ನಿವೃತ್ತಿಯಾಗಲು ಬಯಸಿದ್ದೇನೆ. ನನ್ನ ಪ್ರಕಾರ ಇದು ಸರಿಯಾದ ಸಮಯ. ಪ್ರತಿಯೊಬ್ಬ ಕ್ರೀಡಾಪಟು ತನ್ನ ವೃತ್ತಿಜೀವನದಲ್ಲಿ ನಿವೃತ್ತಿಯ ನಿರ್ಧಾರಕ್ಕೆ ಬರಲೇಬೇಕಾಗುತ್ತದೆ. ಜನರು ನನಗೆ ಕರೆ ಮಾಡಿ ನಿವೃತ್ತಿಯಾಗದಂತೆ ಒತ್ತಾಯಪಡಿಸುತ್ತಿದ್ದಾರೆ. ಆದರೆ, ಇದು ನಿವೃತ್ತಿಗೆ ಸೂಕ್ತ ಸಮಯ. ನಾನು ಯಾವಾಗಲೂ ದೇಶಕ್ಕಾಗಿ ಉತ್ತಮ ಸೇವೆ ನೀಡಲು ಯತ್ನಿಸಿದ್ದೇನೆ’’ ಎಂದು 17 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದ ಯೂನಿಸ್‌ಖಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯೂನಿಸ್‌ಖಾನ್ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. 2009ರಲ್ಲಿ ಪಾಕ್ ತಂಡ ಟ್ವೆಂಟಿ-20 ವಿಶ್ವಕಪ್‌ನ್ನು ಗೆಲ್ಲಲು ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಇದೀಗ ಅವರಿಗೆ 10,000 ಟೆಸ್ಟ್ ರನ್ ಪೂರೈಸಲು ಕೇವಲ 23 ರನ್ ಅಗತ್ಯವಿದೆ. ದಿಢೀರ್ ನಿವೃತ್ತಿ ಘೋಷಿಸಿರುವ ಯೂನಿಸ್ ಸಹ ಆಟಗಾರ ಮಿಸ್ಬಾವುಲ್ ಹಕ್ ಹಾದಿ ಹಿಡಿದಿದ್ದಾರೆ. ಹಕ್ ವಿಂಡೀಸ್ ವಿರುದ್ಧ ಎಪ್ರಿಲ್-ಮೇನಲ್ಲಿ ನಡೆಯಲಿರುವ ಸರಣಿಯ ವೇಳೆ ನಿವೃತ್ತಿಯಾಗಲಿದ್ದಾರೆ.
ಯೂನಿಸ್ 115 ಪಂದ್ಯಗಳಲ್ಲಿ 34 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಪಾಕ್‌ನ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. 10,000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಪಾಕ್‌ನ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ 13ನೆ ಬ್ಯಾಟ್ಸ್‌ಮನ್ ಎನಿಸಿಕೊಳ್ಳುವತ್ತ ಚಿತ್ತವಿರಿಸಿದ್ದಾರೆ. ಪ್ರಸ್ತುತ ಯೂನಿಸ್ 53.06ರ ಸರಾಸರಿಯಲ್ಲಿ 9,977 ರನ್ ಗಳಿಸಿದ್ದಾರೆ. 2009ರಲ್ಲಿ ಶ್ರೀಲಂಕಾದ ವಿರುದ್ಧ ಜೀವನಶ್ರೇಷ್ಠ ಟೆಸ್ಟ್ ಸ್ಕೋರ್(313) ದಾಖಲಿಸಿದ್ದಾರೆ. ಹನೀಫ್ ಮುಹಮ್ಮದ್(337) ಹಾಗೂ ಇಂಝಮಾಮ್‌ವುಲ್‌ಹಕ್(329) ನಂತರ ಪಾಕ್ ಪರ 3ನೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಪಾಕ್ ತಂಡ 2-2 ರಿಂದ ಟೆಸ್ಟ್ ಸರಣಿಯನ್ನ್ನು ಸಮಬಲಗೊಳಿಸಲು ಮಹತ್ವದ ಕಾಣಿಕೆ ನೀಡಿದ್ದ ಯೂನಿಸ್ ಪ್ರತಿಷ್ಠಿತ ‘ವಿಸ್ಡನ್ ವರ್ಷದ ಕ್ರಿಕೆಟಿಗ’ನೆಂಬ ಗೌರವಕ್ಕೆ ಪಾತ್ರರಾಗಿದ್ದರು.
2000ರಲ್ಲಿ ರಾವಲ್ಪಿಂಡಿಯಲ್ಲಿ ಶ್ರೀಲಂಕಾದ ವಿರುದ್ಧ ತನ್ನ ಮೊದಲ ಪಂದ್ಯದಲ್ಲೇ ಯೂನಿಸ್ ಶತಕ ಬಾರಿಸಿ ತನ್ನ ವೃತ್ತಿಜೀವನ ಆರಂಭಿಸಿದ್ದರು. 2005ರಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ದ್ವಿಶತಕ ಬಾರಿಸಿ ಪಾಕ್ ಸರಣಿ ಸಮಬಲಗೊಳಿಸಲು ನೆರವಾಗಿದ್ದರು.