×
Ad

ಐಪಿಎಲ್: ಪಂಜಾಬ್‌ಗೆ ಮೊದಲ ಜಯ

Update: 2017-04-08 19:55 IST

ಇಂದೋರ್, ಎ.8: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ನಾಲ್ಕನೆ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 6 ವಿಕೆಟ್‌ಗಳ ಜಯ ಗಳಿಸಿದೆ.

  ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 164 ರನ್‌ಗಳ ಸವಾಲನ್ನು ಪಡೆದ ಪಂಜಾಬ್ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಕಲೆ ಹಾಕಿ ಗೆಲುವಿನ ದಡಸೇರಿತು.

ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಔಟಾಗದೆ 44 ರನ್(20ಎ, 2ಬೌ,4ಸಿ), ಡೇವಿಡ್ ಮಿಲ್ಲರ್ ಔಟಾಗದೆ 30ರನ್(27ಎ, 1ಬೌ, 2ಸಿ)ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಇವರು ಮುರಿಯದ ಜೊತೆಯಾಟದಲ್ಲಿ 5ನೆ ವಿಕೆಟ್‌ಗೆ 79 ರನ್ ಸೇರಿಸಿದರು.

ಹಾಶಿಮ್ ಅಮ್ಲ 28 ರನ್, ಮನನ್ ವೋರಾ 14ರನ್, ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 14ರನ್, ಅಕ್ಷರ್ ಪಟೇಲ್ 24 ರನ್ ಗಳಿಸಿದರು.

ಪುಣೆ ತಂಡದ  ಇಮ್ರಾನ್ ತಾಹಿರ್ 29ಕ್ಕೆ 2, ಅಶೋಕ್ ದಿಂಡಾ ಮತ್ತು ಚಾಹರ್ ತಲಾ 1 ವಿಕೆಟ್ ಪಡೆದರು.

ಸ್ಕೋಕ್ಸ್ ಅರ್ಧಶತಕ; ಪುಣೆ 163/6

ರೈಸಿಂಗ್ ಪುಣೆ ಸೂಪರ್‌ಜೈಂಟ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 163 ರನ್ ಗಳಿಸಿತ್ತು.

 ಪುಣೆ ತಂಡದ ಪರ ಬೆನ್ ಸ್ಟೋಕ್ಸ್ 50 ರನ್ ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

 ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಪುಣೆ ಆರಂಭಿಕ ದಾಂಡಿಗರಿಬ್ಬರನ್ನು ಬೇಗನೆ ಕಳೆದುಕೊಂಡಿತ್ತು. ಮೊದಲ ಓವರ್‌ನ ಐದನೆ ಎಸೆತದಲ್ಲಿ ಮಾಯಾಂಕ್ ಅಗರವಾಲ್ (0) ಖಾತೆ ತೆರೆಯದೆ ಸಂದೀಪ್ ಶರ್ಮಗೆ ವಿಕೆಟ್ ಒಪ್ಪಿಸಿದರು. 7ನೆ ಓವರ್‌ನ ಎರಡನೆ ಎಸೆತದಲ್ಲಿ ಅಜಿಂಕ್ಯ ರಹಾನೆ (19)ಅವರು ಟಿ.ನಟರಾಜನ್ ಎಸೆತದಲ್ಲಿ ಸ್ಟೋನಿಸ್‌ಗೆ ಕ್ಯಾಚ್ ನೀಡಿದರು.

ನಾಯಕ ಸ್ಟೀವ್ ಸ್ಮಿತ್ (26) ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(5) ಅವರಿಂದ ದೊಡ್ಡ ಕೊಡುಗೆ ಲಭ್ಯವಾಗಲಿಲ್ಲ.

 11.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 71 ರನ್ ಗಳಿಸಿದ್ದ ಪುಣೆ ತಂಡವನ್ನು ಮನೋಜ್ ತಿವಾರಿ ಮತ್ತು ಬೆನ್ ಸ್ಟೋಕ್ಸ್ ಆಧರಿಸಿದರು. ಇವರು ಐದನೆ ವಿಕೆಟ್‌ಗೆ 6.1 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿದರು. ಆಲ್‌ರೌಂಡರ್ ಸ್ಟೋಕ್ಸ್ 32 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 50ರನ್‌ಗಳ ಕೊಡುಗೆ ನೀಡಿದರು.

ಸ್ಟೋಕ್ಸ್ ಅರ್ಧಶತಕ ದಾಖಲಿಸಿದ ಬೆನ್ನಲ್ಲೆ ಅಕ್ಷರ್ ಪಟೇಲ್‌ಗೆ ರಿಟರ್ನ್ ಕ್ಯಾಚ್ ನೀಡಿದರು.

ಬಳಿಕ ಮನೋಜ್ ತಿವಾರಿ ಮತ್ತು ಡೇನಿಯಲ್ ಕ್ರಿಶ್ಟಿಯನ್ 2.2 ಓವರ್‌ಗಳಲ್ಲಿ ವೇಗದ 30 ರನ್ ಜಮೆ ಮಾಡಿದರು. ಕ್ರಿಶ್ಟಿಯನ್ 8 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 17 ರನ್ ಗಳಿಸಿ ಔಟಾದರು. ಮನೋಜ್ ತಿವಾರಿ 40ರನ್ (23ಎ, 3ಬೌ,2ಸಿ) ಗಳಿಸಿ ಔಟಾಗದೆ ಉಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News