×
Ad

ಪಾಕ್ ವಿರುದ್ಧ ವಿಂಡೀಸ್‌ಗೆ ಐತಿಹಾಸಿಕ ಗೆಲುವು

Update: 2017-04-08 23:53 IST

  ಗಯಾನ, ಎ.7: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೇಸನ್ ಮುಹಮ್ಮದ್ ಅಜೇಯ 91 ರನ್ ಸಹಾಯದಿಂದ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ 300ಕ್ಕೂ ಅಧಿಕ ರನ್ ಬೆನ್ನಟ್ಟಿ ಐತಿಹಾಸಿಕ ಸಾಧನೆ ಮಾಡಿದೆ.

 ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 308 ರನ್ ಗಳಿಸಿತು. ಮುಹಮ್ಮದ್ ಭರ್ಜರಿ ಬ್ಯಾಟಿಂಗ್ (ಅಜೇಯ 91, 58 ಎಸೆತ, 11 ಬೌಂಡರಿ,3 ಸಿಕ್ಸರ್)ಹಾಗೂ ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಅಶ್ಲೆ ನರ್ಸ್(ಅಜೇಯ 34, 15 ಎಸೆತ, 5 ಬೌಂಡರಿ, 1 ಸಿಕ್ಸರ್) ಬೆಂಬಲದಿಂದ ಇನ್ನೂ 1 ಓವರ್ ಬಾಕಿ ಇರುವಾಗಲೇ ವಿಂಡೀಸ್ ಜಯಭೇರಿ ಬಾರಿಸಿತು. ಕಳೆದ 31 ಪಂದ್ಯಗಳಲ್ಲಿ 300ಕ್ಕಿಂತ ಹೆಚ್ಚು ರನ್ ಚೇಸಿಂಗ್ ಮಾಡಲು ವಿಫಲವಾಗಿದ್ದ ವಿಂಡೀಸ್ ತಂಡ 44 ವರ್ಷಗಳ ಬಳಿಕ ಈ ಸಾಧನೆ ಮಾಡಿದೆ.

ವಿಂಡೀಸ್ ಆರಂಭಿಕ ಆಟಗಾರ ವಾಲ್ಟನ್(7) ವಿಕೆಟ್‌ನ್ನು ಬೇಗನೆ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೆ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದ್ದ ಎವಿನ್ ಲೂಯಿಸ್(47) ಹಾಗೂ ಕೀರನ್ ಪೊಲಾರ್ಡ್(61) ತಂಡಕ್ಕೆ ಆಸರೆಯಾದರು. ವಿಂಡೀಸ್ 45ನೆ ಓವರ್‌ನಲ್ಲಿ 259 ರನ್‌ಗೆ 6 ವಿಕೆಟ್ ಕಳೆದುಕೊಂಡಿತ್ತು. ಕೇವಲ 15 ಎಸೆತಗಳಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿದ ಆಶ್ಲೆ ನರ್ಸ್ ಪಂದ್ಯದ ಚಿತ್ರಣವನ್ನು ಬದಲಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ್ದ ನರ್ಸ್(4-62) ಆಲ್‌ರೌಂಡ್ ಪ್ರದರ್ಶನದಿಂದ ತಂಡಕ್ಕೆ ಐತಿಹಾಸಿಕ ಗೆಲುವು ತಂದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಅಹ್ಮದ್ ಶೆಹ್‌ಝಾದ್(67), ಮುಹಮ್ಮದ್ ಹಫೀಝ್(88), ಶುಐಬ್ ಮಲಿಕ್(53) ಹಾಗೂ ಕಮ್ರಾನ್ ಅಕ್ಮಲ್(47) ಸಂಘಟಿತ ಪ್ರದರ್ಶನದ ಸಹಾಯದಿಂದ ಪಾಕ್ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 308 ರನ್ ಗಳಿಸಿತ್ತು. ವಿಂಡೀಸ್ ಪರ ನರ್ಸ್ ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News