ಧೋನಿ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ ಹರ್ಷ್ ಗೋಯೆಂಕಾ
ಪುಣೆ, ಎ.9: ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪುಣೆ ತಂಡದ ಮಾಲಕರ ನಡುವೆ ಸಂಬಂಧ ಸುಮಧುರವಾಗಿಲ್ಲ.
ಆರ್‌ಪಿಎಸ್ ತಂಡದ ಮಾಲಕ ಸಂಜಯ್ ಗೋಯೆಂಕಾ ಸಹೋದರ ಹರ್ಷ್ ಗೋಯೆಂಕಾ ಅವರು ಧೋನಿ ಆಟದ ಬಗ್ಗೆ ಟ್ವಿಟರ್‌ನಲ್ಲಿ ಕೆಟ್ಟದಾಗಿ ಟೀಕಿಸಿ ಧೋನಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡ ಎ.6ರಂದು ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತ್ತು. ತಂಡದ ನೂತನ ನಾಯಕ ಸ್ಟೀವ್ ಸ್ಮಿತ್ ಔಟಾಗದೆ 84 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಮಾಜಿ ನಾಯಕ ಧೋನಿ ಔಟಾಗದೆ 12 ರನ್ ಗಳಿಸಿದ್ದರು.
ಕಳೆದ ವರ್ಷ ಪುಣೆ ತಂಡಕ್ಕೆ ಧೋನಿ ನಾಯಕರಾಗಿದ್ದರು. ಈ ವರ್ಷ ಅವರ ಕೈಯಿಂದ ನಾಯಕತ್ವವನ್ನು ಕಿತ್ತುಕೊಂಡು ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಮಿತ್‌ಗೆ ನಾಯಕತ್ವ ನೀಡಲಾಗಿದೆ. ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಸ್ಮಿತ್ ಆಟ ನೋಡಿದ ಹರ್ಷ್ ಗೋಯೆಂಕಾ ಅವರಿಗೆ ಧೋನಿ ಮೇಲಿನ ಸಿಟ್ಟನ್ನು ಹೊರಗೆಡವಲು ಅವಕಾಶ ಒದಗಿಸಿತ್ತು.
ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಚೇರ್ಮನ್ ಆಗಿರುವ ಹರ್ಷ್ ಗೋಯೆಂಕಾ ಅವರು ಸ್ಮಿತ್ ಬ್ಯಾಟಿಂಗ್ ಬಗ್ಗೆ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ‘‘ಸ್ಮಿತ್ ತಾನು ಕಾಡಿನ ರಾಜ ಎನ್ನುವುದನ್ನು ತೋರಿಸಿಕೊಟ್ಟರು. ನಾಯಕ ಸ್ಮಿತ್ ಆಟದ ಮುಂದೆ ಧೋನಿ ಆಟ ಮಸುಕಾಗಿತ್ತು. ಆರ್‌ಪಿಸಿ ಸ್ಮಿತ್‌ರನ್ನು ನಾಯಕತ್ವದ ಜವಾಬ್ದಾರಿಯನ್ನು ನೀಡಿದ್ದು ಸರಿಯಾದ ನಿರ್ಧಾರ ’’ ಎಂದು ಹೇಳಿದ್ದರು.
ಗೋಯೆಂಕಾ ಟ್ವೀಟ್ ನೋಡಿದ ಧೋನಿ ಅಭಿಮಾನಿಗಳು ಗೋಯೆಂಕಾಗೆ ಸರಿಯಾಗಿಯೇ ಉಗಿದಿದ್ದಾರೆ.
‘‘ ನಿಮಗೆ ನಾಚಿಯಾಗಬೇಕು ಎಚ್ ಗೋಯೆಂಕಾ. ಧೋನಿಗೆ ಗೌರವ ನೀಡಿ. ವಿದೇಶಿ ಆಟಗಾರರನ್ನು ಮುಂದಿಟ್ಟು ಭಾರತದ ಆಟಗಾರರನ್ನು ಅವಮಾನಿಸಬೇಡಿ’’ ಎಂದು ಪ್ರದೀಪ್ ಪಾರಿಹಾರ್ ಟ್ವೀಟ್ ಮಾಡಿದ್ದಾರೆ.
‘‘ ಧೋನಿಯನ್ನು ನಾಯಕತ್ವದಿಂದ ಕೆಳಗಿಸಿದ ಹಿನ್ನೆಲೆಯಲ್ಲಿ ಪುಣೆ ತಂಡದ ಶೇ 80ರಷ್ಟು ಅಭಿಮಾನಿಗಳು ದೂರವಾಗಿದ್ಧಾರೆ. ಇದೀಗ ಉಳಿದ ಶೇ 20ರಷ್ಟು ಅಭಿಮಾನಿಗಳು ನಿಮ್ಮ ಟ್ವೀಟ್ ನೋಡಿ. ಪುಣೆ ತಂಡವನ್ನು ಕೈ ಬಿಟ್ಟಿದ್ದಾರೆ’’ ಎಂದು ಡ್ರಂಕ್ ಬ್ಯಾಟ್‌ಮ್ಯಾನ್ ಹೇಳಿದ್ದಾರೆ.
‘‘ ಇವತ್ತು ಸ್ಮಿತ್ ದಿನವಾಗಿರಬಹುದು. ಆದರೆ ಲೆಜೆಂಡ್‌ಗೆ ಗೌರವ ಕೊಡುವ ಬಗ್ಗೆ ಕಲಿಯಿರಿ. ನೀವು ಇನ್ನೊಬ್ಬರ ಜೊತೆ ಹೋಲಿಸುವ ಮೊದಲು ತನ್ನ ದೇಶಕ್ಕಾಗಿ ಎಲ್ಲ ಟ್ರೋಫಿಗಳನ್ನು ಗೆದ್ದು ತಂದವರು ಯಾರು ಎನ್ನುವುದನ್ನು ಅರಿತುಕೊಳ್ಳಿ’’ ಎಂದು ಧೋನಿ ಅಭಿಮಾನಿಯೊಬ್ಬರು ಹೇಳಿದ್ದಾರೆ.
ಧೋನಿ ವಿಚಾರದಲ್ಲಿ ಅನಗತ್ಯವಾಗಿ ವಿವಾದವನ್ನುಂಟು ಮಾಡಿದ ಹರ್ಷ್‌ಗೆ ಗೋಯೆಂಕಾ ಅವರು ಧೋನಿ ಅಭಿಮಾನಿಗಳಿಂದ ಚೆನ್ನಾಗಿ ಉಗಿಸಿಕೊಂಡರೂ, ತನ್ನ ಟ್ವೀಟ್ನ್ನು ನಿಲ್ಲಿಸಿಲ್ಲ. ಎರಡನೆ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಪಿಎಸ್ ಸೋಲು ಅನುಭವಿಸಿತ್ತು. ಹೀಗಿದ್ದರೂ ಗೋಯೆಂಕಾ ಪುಣೆ ತಂಡದ ಆಟಗಾರರಾದ ಮನೋಜ್ ತಿವಾರಿ, ರಹಾನೆ, ಕ್ರಿಶ್ಟಿಯನ್ ಅವರ ಬ್ಯಾಟಿಂಗ್‌ನ ಅಂಕಿ ಅಂಶ ನೀಡಿ. ಇವೆರಲ್ಲ ಅತ್ಯುತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಧೋನಿ 73.91 ಸ್ಟ್ರೈಕ್ ರೇಟ್‌ನೊಂದಿಗೆ ಐದನೆ ಸ್ಥಾನದಲ್ಲಿದ್ದಾರೆ. ಕ್ರಿಶ್ಟಿಯನ್ ಐಪಿಎಲ್‌ನಲ್ಲಿ ಶನಿವಾರ ಮೊದಲ ಪಂದ್ಯವನ್ನಾಡಿದ್ದಾರೆ. ಕೇವಲ 17ರನ್ ದಾಖಲಿಸಿದ್ದರು. ಧೋನಿ ಕೇವಲ ಎರಡು ಪಂದ್ಯಗಳಲ್ಲಿ ನೀಡಿರುವ ಪ್ರದರ್ಶನವನ್ನು ನೋಡಿದ ಗೋಯೆಂಕಾ ಅವರು ಧೋನಿ ವಿರುದ್ಧ ತಮಗಿರುವ ಅಸಮಾಧಾನವನ್ನು ತೋರಿಸಿಕೊಡಲು ಅವಕಾಶವನ್ನು ಬಳಸಿಕೊಂಡಿದ್ದಾರೆ.
#RPS batting statistics until now - Manoj Tiwari, Rahane , Christian have the best strike rates. pic.twitter.com/JKya3lxHKC
— Harsh Goenka (@hvgoenka) April 8, 2017
@hvgoenka Fool look at this stat of @msdhoni pic.twitter.com/BMsGbXh3Pd
— Dhoni My Hero (@MSDIAN7) April 8, 2017