×
Ad

ಲಿನ್‌ಗೆ ಭುಜನೋವು: ಐಪಿಎಲ್‌ನಲ್ಲಿ ಆಡುವುದು ಸಂಶಯ

Update: 2017-04-10 23:55 IST

ಕೋಲ್ಕತಾ, ಎ.10: ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಭುಜನೋವಿಗೆ ಒಳಗಾಗಿದ್ದ ಕೋಲ್ಕತಾ ನೈಟ್ ರೈಡರ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್ ಬ್ಯಾಟ್ಸ್‌ಮನ್ ಲಿನ್‌ಗೆ ಎರಡು ವರ್ಷದೊಳಗೆ ಮೂರನೆ ಬಾರಿ ಭುಜನೋವು ಕಾಣಿಸಿಕೊಂಡಿದೆ. ಮುಂಬೈ ವಿರುದ್ಧದ ಪಂದ್ಯದ ವೇಳೆ ಜೋಸ್ ಬಟ್ಲರ್ ನೀಡಿದ್ದ ಕ್ಯಾಚ್ ಪಡೆಯುವ ವೇಳೆ ನೋವು ಕಾಣಿಸಿಕೊಂಡಿದೆ. ನೈಟ್ ರೈಡರ್ಸ್ ಫಿಸಿಯೋ ಆ್ಯಂಡ್ಯೂ ಲೇಪಸ್ ಲಿನ್‌ಗೆ ಚಿಕಿತ್ಸೆ ನೀಡಿದ್ದು, ಲಿನ್ ಭುಜಕ್ಕೆ ಐಸ್‌ಪ್ಯಾಕ್ ಇಡಲಾಗಿದೆ.

‘‘ ಪ್ರೀತಿಯ ಕ್ರಿಕೆಟ್ ದೇವರೇ, ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ಎಂದು ಪಂದ್ಯದ ಬಳಿಕ ಲಿನ್ ಟ್ವೀಟ್ ಮಾಡಿದ್ದಾರೆ. ಲಿನ್ ಟ್ವಿಟರ್‌ನ ಮೂಲಕ ಇನ್ನೂ ಕೆಲವು ಸಮಯ ಸಕ್ರಿಯ ಕ್ರಿಕೆಟ್‌ನಿಂದ ಹೊರಗುಳಿಯುವ ಸೂಚನೆ ನೀಡಿದ್ದಾರೆ.

ಲಿನ್ ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಅಜೇಯ 93 ರನ್ ಗಳಿಸುವ ಮೂಲಕ ಟೂರ್ನಮೆಂಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ 32 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News