ಡಿವಿಲಿಯರ್ಸ್ ಪಂಜಾಬ್ ವಿರುದ್ಧ ಮ್ಯಾಜಿಕ್ ಇನಿಂಗ್ಸ್‌ಗೆ ಸ್ಫೂರ್ತಿ ಯಾರು ಗೊತ್ತೇ?
ಇಂದೋರ್, ಎ.11: ಪಂಜಾಬ್ ವಿರುದ್ಧ ಸೋಮವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಸೋಲುಂಡಿದೆ. ಆದರೆ, ತಂಡದ ಪರ ಏಕಾಂಗಿ ಹೋರಾಟ ನೀಡಿದ ಎಬಿ ಡಿವಿಲಿಯರ್ಸ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿರುವ ಡಿವಿಲಿಯರ್ಸ್ ತಾನೇಕೆ ‘ಕ್ರಿಕೆಟ್‌ನ ಸೂಪರ್‌ಮ್ಯಾನ್’ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎಂಬ ಮಾತಿದೆ. ಈ ಮಾತು ಡಿವಿಲಿಯರ್ಸ್‌ಗೆ ಅನ್ವಯಿಸುತ್ತದೆ.
ಬೆನ್ನುನೋವಿನಿಂದಾಗಿ ಆರ್‌ಸಿಬಿ ಪರ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಡಿವಿಲಿಯರ್ಸ್ ಪಂಜಾಬ್ ವಿರುದ್ಧ ಸೋಮವಾರ ರಾತ್ರಿ ಆಡುವ ಬಗ್ಗೆಯೂ ಅನುಮಾನವಿತ್ತು. ಕೊನೆಯ ಕ್ಷಣದಲ್ಲಿ ಆಡುವ ನಿರ್ಧಾರಕ್ಕೆ ಬಂದಿದ್ದ ಅವರು ತಂಡದ 11ರ ಬಳಗವನ್ನು ಸೇರಿಕೊಂಡಿದ್ದರು.
‘‘ಸೋಮವಾರದ ಪಂದ್ಯದಲ್ಲಿ ಆಡಿರುವುದು ಸ್ವತಹ ನನಗೇ ಅಚ್ಚರಿ ತಂದಿದೆ. ಪಂದ್ಯ ಆಡುವ ಬಗ್ಗೆ ನನಗೆ ಸಂಶಯವಿತ್ತು. ಆ ಸಂಶಯ ನಿವಾರಿಸಿದ್ದು ನನ್ನ ಪತ್ನಿ. ಪಂದ್ಯ ಆರಂಭಕ್ಕೆ ಮೊದಲು ಪತ್ನಿ ಡೇನಿಯಲ್ ಸಲಹೆ ಪಡೆಯುವ ಉದ್ದೇಶದಿಂದ ಆಕೆಗೆ ಫೋನ್ ಮಾಡಿದ್ದೆ. ಆಕೆ ಸ್ವಲ್ಪ ಹೊತ್ತು ಬಿಟ್ಟು ನನಗೆ ಕರೆ ಮಾಡಿ ಧೈರ್ಯ ತುಂಬಿದ್ದಳು. ಆಕೆ ನಾಳೆ ನನ್ನ ಪುಟ್ಟ ಮಗನೊಂದಿಗೆ ಭಾರತಕ್ಕೆ ಆಗಮಿಸಲಿದ್ದು, ಆಕೆಯೇ ನನಗೆ ಸ್ಫೂರ್ತಿಯಾಗಿದ್ದಾಳೆ ಎಂದು ಡಿವಿಲಿಯರ್ಸ್ ಹೇಳಿದರು.
ಇಂದೋರ್‌ನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ 3 ಬೌಂಡರಿ ಹಾಗೂ ಆರು ಸಿಕ್ಸರ್‌ಗಳ ಸಹಿತ ಅಜೇಯ 89 ರನ್ ಗಳಿಸಿದ್ದ ಡಿವಿಲಿಯರ್ಸ್ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಲು ನೆರವಾಗಿದ್ದರು.
ಆರ್‌ಸಿಬಿ 15.2 ಓವರ್‌ಗಳಲ್ಲಿ 72 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. 28 ಎಸೆತಗಳಲ್ಲಿ 31 ರನ್ ಗಳಿಸಿದ್ದ ಡಿವಿಲಿಯರ್ಸ್ ಮುಂದಿನ 18 ಎಸೆತಗಳಲ್ಲಿ 58 ರನ್ ಕಲೆ ಹಾಕಿ ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿದ್ದರು. ಎರಡು ಚೆಂಡು ಮೈದಾನದಿಂದ ಹೊರಹೋಗಿತು¤.