×
Ad

ಕೇವಲ ನಾಲ್ಕು ಎಸೆತಗಳಲ್ಲಿ 92 ರನ್

Update: 2017-04-12 17:53 IST

ಢಾಕಾ, ಎ.12: ಬಾಂಗ್ಲಾದೇಶ ಕ್ಲಬ್‌ನ ಆರಂಭಿಕ ಬೌಲರ್ ಕೇವಲ 4 ಎಸೆತಗಳಲ್ಲಿ 92 ರನ್ ಬಿಟ್ಟುಕೊಟ್ಟು ಸಾಟಿಯಿಲ್ಲದ ದಾಖಲೆ ನಿರ್ಮಿಸಿದ್ದಾನೆ. ಢಾಕಾ ದ್ವಿತೀಯ ದರ್ಜೆ ಕ್ರಿಕೆಟ್ ಲೀಗ್‌ನಲ್ಲಿ ಕಳಪೆ ಅಂಪೈರಿಂಗ್‌ನ್ನು ಪ್ರತಿಭಟಿಸಿ ಉದ್ದೇಶಪೂರ್ವಕವಾಗಿ ಈ ವಿಚಿತ್ರ ಬೌಲಿಂಗ್ ನಡೆಸಿದ್ದಾನೆ.

ಢಾಕಾ ಸೆಕೆಂಡ್ ಡಿವಿಜನ್ ಲೀಗ್‌ನಲ್ಲಿ 50 ಓವರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಾಲ್‌ಮಟಿಯ ಕ್ಲಬ್ 14 ಓವರ್‌ಗಳಲ್ಲಿ 88 ರನ್‌ಗೆ ಆಲೌಟಾಗಿತ್ತು. ಎದುರಾಳಿ ಆಕ್ಸಿಯೊಮ್ ಕ್ರಿಕೆಟ್ ತಂಡ ಕೇವಲ ನಾಲ್ಕು ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 92 ರನ್ ಗಳಿಸಿತ್ತು.

 ಲಾಲ್‌ಮಟಿಯ ತಂಡದ ಆರಂಭಿಕ ಬೌಲರ್ ಸುಜೊನ್ ಮಹಮೂದ್ 13 ವೈಡ್ ಹಾಗೂ ಮೂರು ನೋ -ಬಾಲ್‌ಗಳನ್ನು ಎಸೆದಿದ್ದರು. ಎಲ್ಲ ಎಸೆತಗಳು ಬೌಂಡರಿ ಗೆರೆ ದಾಟಿದ್ದವು. ಬೌಂಡರಿ ಮೂಲಕ 64 ರನ್ ಹಾಗೂ ಇತರೇ 16 ರನ್ ಸೇರಿ ಒಟ್ಟು 80 ರನ್ ಹರಿದುಬಂತು. ಮಹಮೂದ್ ಸರಿಯಾಗಿ ಎಸೆದಿದ್ದ ನಾಲ್ಕು ಎಸೆತಗಳಲ್ಲಿ ಎದುರಾಳಿ ತಂಡದ ಆರಂಭಿಕ ಆಟಗಾರ ಮುಸ್ತಫಿಝುರ್ರಹ್ಮಾನ್ 12 ರನ್ ಗಳಿಸಿದ್ದರು. ಆಕ್ಸಿಯೊಮ್ ತಂಡ 0.4 ಓವರ್‌ಗಳಲ್ಲಿ ಒಟ್ಟು 92 ರನ್ ದಾಖಲಿಸಿ 10 ವಿಕೆಟ್‌ಗಳ ಜಯ ಸಾಧಿಸಿತ್ತು.

‘‘ಕಳಪೆ ಅಂಪೈರಿಂಗ್‌ನ್ನು ಪ್ರತಿಭಟಿಸುವ ಸಲುವಾಗಿ ನಮ್ಮ ಆಟಗಾರ ಉದ್ದೇಶಪೂರ್ವಕವಾಗಿ ವೈಡ್ ಹಾಗೂ ನೋ-ಬಾಲ್‌ಗಳನ್ನು ಎಸೆದಿದ್ದರು. ಲೀಗ್‌ನ ಉದ್ದಕ್ಕೂ ಅಂಪೈರಿಂಗ್ ಕಳಪೆಯಾಗಿತ್ತು. ಟಾಸ್ ಬಳಿಕ ಅಂಪೈರ್ ನಮ್ಮ ತಂಡದ ನಾಯಕನಿಗೆ ನಾಣ್ಯವನ್ನು ನೋಡಲು ಅವಕಾಶ ನೀಡಿರಲಿಲ್ಲ. ಟಾಸ್ ಹಾರಿಸಿದ ಬಳಿಕ ನೀವು ಬ್ಯಾಟಿಂಗ್ ಮಾಡಿ ಎಂದು ನಮ್ಮ ತಂಡಕ್ಕೆ ಅಂಪೈರ್ ಸೂಚಿಸಿದ್ದರು. ತಂಡ ಬ್ಯಾಟಿಂಗ್ ಆರಂಭಿಸಿದ ತಕ್ಷಣ 7 ಓವರ್‌ನೊಳಗೆ 11 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು’’ಎಂದು ಲಾಲ್‌ಮಟಿಯ ಕ್ಲಬ್ ಕಾರ್ಯದರ್ಶಿ ಅದ್ನಾನ್ ರಹ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News