×
Ad

ಡಾರ್ಟ್‌ಮಂಡ್ ಫುಟ್ಬಾಲ್ ತಂಡದ ಬಸ್ ಸಮೀಪ ಬಾಂಬು ಸ್ಫೋಟ

Update: 2017-04-12 23:49 IST

    ಡಾರ್ಟ್‌ಮಂಡ್(ಜರ್ಮನಿ), ಎ.12: ಜರ್ಮನಿಯ ಬೊರುಸ್ಸಿಯ ಡಾರ್ಟ್‌ಮಂಡ್ ಫುಟ್ಬಾಲ್ ತಂಡದ ಸದಸ್ಯರು ಪ್ರಯಾಣಿಸುತ್ತಿದ್ದ ಬಸ್‌ನ ಸಮೀಪ ಸರಣಿ ಬಾಂಬು ಸ್ಫೋಟ ಸಂಭವಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಬಸ್‌ಗೆ ಹಾನಿಯಾಗಿದ್ದು, ಓರ್ವ ಆಟಗಾರನಿಗೆ ಗಾಯವಾಗಿದೆ.

ಸಂಜೆ 7:15ರ ಸುಮಾರಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದು, ಡಾರ್ಟ್‌ಮಂಡ್ ಆಟಗಾರರಿದ್ದ ಬಸ್ಸು ಆಟಗಾರರು ವಾಸ್ತವ್ಯವಿದ್ದ ಹೊಟೇಲ್‌ನಿಂದ ಹೊರಟ ಕೆಲವೇ ಕ್ಷಣದಲ್ಲಿ ಈ ಘಟನೆ ನಡೆದಿದೆ.

ಜರ್ಮನಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಮೊನಾಕೊ ತಂಡದ ವಿರುದ್ಧದ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲು ಡಾರ್ಟ್‌ಮಂಡ್ ತಂಡದ ಸದಸ್ಯರು ಬಸ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬು ಸ್ಪೋಟಗೊಂಡ ಪರಿಣಾಮ ಬಸ್‌ನ ಕಿಟಕಿ ಗಾಜು ಪುಡಿಪುಡಿಯಾಗಿದ್ದು, ಸ್ಪೇನ್‌ನ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಮಾರ್ಕ್ ಬಾರ್ಟಾ(26)ಮೊಣಕೈಗೆ ಬಸ್‌ನ ಕಿಟಕಿಗಾಜಿನ ಚೂರು ಹೊಕ್ಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಂಬು ಸ್ಫೋಟ ಘಟನೆ ನಡೆದ ತಕ್ಷಣ ಮೋಟಾರ್‌ಸೈಕಲ್‌ನಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್‌ನ್ನು ಸುತ್ತುವರಿದಿದ್ದರು.

‘‘ಇಡೀ ತಂಡ ಆಘಾತಕ್ಕೀಡಾಗಿದೆ. ಇಂತಹ ಕರಾಳ ದೃಶ್ಯ ನಮ್ಮ ಮನಸ್ಸಿನಿಂದ ಸದಾ ನೆನಪಿನಲ್ಲಿರುತ್ತದೆ’’ ಎಂದು ಡಾರ್ಟ್‌ಮಂಡ್‌ನ ಸಿಇಒ ಹ್ಯಾನ್ಸ್ ಜೋಕಿಮ್ ಹೇಳಿದ್ದಾರೆ.

ಸ್ಪೋಟಕ್ಕೆ ಬಳಸಲಾಗಿರುವ ಬಾಂಬುಗಳನ್ನು ಮನೆಯಲ್ಲೇ ತಯಾರಿಸಿರುವ ಸಾಧ್ಯತೆಯಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬಾಂಬುಸ್ಫೋಟದ ಪರಿಣಾಮ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುವುದು. ಪಂದ್ಯ ಸುರಕ್ಷಿತವಾಗಿ ನಡೆಯಲು ಎಲ್ಲ ಮುನ್ನಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ ಎಂದು ಡಾರ್ಟ್‌ಮಂಡ್ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News