×
Ad

ಫಿಟ್‌ನೆಸ್ ಪರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಪಾಸ್

Update: 2017-04-13 22:49 IST

ಬೆಂಗಳೂರು, ಎ.13: ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಶುಕ್ರವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆಡಲಿದ್ದಾರೆ.

  ಕೊಹ್ಲಿ ಗಾಯದಿಂದ ಚೇತರಿಸಿಕೊಂಡಿದ್ದಾರೆ ಎಂದು ಪತ್ರಿಕಾಪ್ರಕಟನೆಯಲ್ಲಿ ಗುರುವಾರ ದೃಢಪಡಿಸಿದ ಬಿಸಿಸಿಐ, ಆರ್‌ಸಿಬಿ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಲ ಭುಜನೋವಿನಿಂದ ಚೇತರಿಸಿಕೊಂಡಿದ್ದಾರೆ ಎಂದಿದೆ.

ಕಳೆದ ತಿಂಗಳು ಭಾರತ ಹಾಗೂ ಆಸ್ಟ್ರೇಲಿಯದ ನಡುವೆ ರಾಂಚಿಯಲ್ಲಿ ನಡೆದ ಮೂರನೆ ಟೆಸ್ಟ್ ಪಂದ್ಯದ ವೇಳೆ ಬೌಂಡರಿಲೈನ್ ಸಮೀಪ ಚೆಂಡನ್ನು ತಡೆಯಲು ಜಿಗಿದಿದ್ದ ಕೊಹ್ಲಿಗೆ ಭುಜನೋವು ಕಾಣಿಸಿಕೊಂಡಿತ್ತು. ಗಾಯದ ಸಮಸ್ಯೆಯಿಂದಾಗಿ 10ನೆ ಆವೃತ್ತಿಯ ಐಪಿಎಲ್‌ನ ಮೊದಲ 3 ಪಂದ್ಯಗಳಲ್ಲಿ ಕೊಹ್ಲಿ ಆಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಶೇನ್ ವ್ಯಾಟ್ಸನ್ ನಾಯಕತ್ವವಹಿಸಿಕೊಂಡಿದ್ದು, ಮೂರು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಜಯ ಸಾಧಿಸಿದೆ.

2016ರ ಐಪಿಎಲ್‌ನಲ್ಲಿ 16 ಪಂದ್ಯಗಳನ್ನು ಆಡಿದ್ದ ಕೊಹ್ಲಿ ಒಟ್ಟು 973 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಇದರಲ್ಲಿ 4 ಶತಕ ಹಾಗೂ 7 ಅರ್ಧಶತಕಗಳಿವೆ.

ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ವಿಲಿಯರ್ಸ್ ಅವರು ಕೊಹ್ಲಿ ಮುಂಬೈ ವಿರುದ್ಧ ಪಂದ್ಯಕ್ಕೆ ಲಭ್ಯವಿರುತ್ತಾರೆಂದು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News