×
Ad

ಸಿಂಗಾಪುರ ಓಪನ್: ಸಿಂಧು ಕ್ವಾರ್ಟರ್ ಫೈನಲ್‌ಗೆ

Update: 2017-04-13 22:51 IST

ಕೌಲಾಲಂಪುರ, ಎ.13: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಸಿಂಗಾಪುರ ಓಪನ್ ಸೂಪರ್ ಸರಣಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 5ನೆ ಶ್ರೇಯಾಂಕಿತ ಸಿಂಧು ಇಂಡೋನೇಷ್ಯದ ಫಿಟ್ರಿಯಾನಿ ಫ್ಯಾನಿಟ್ರಿ ವಿರುದ್ಧ 19-21, 21-17, 21-8 ಗೇಮ್‌ಗಳಿಂದ ಜಯ ಸಾಧಿಸಿದ್ದಾರೆ.

27ನೆ ರ್ಯಾಂಕಿನ ಫಿಟ್ರಿಯಾನಿ ಮೊದಲ ಗೇಮ್‌ನ್ನು 21-19 ರಿಂದ ಗೆದ್ದುಕೊಂಡಿದ್ದರು. ಆದರೆ, ಎರಡನೆ ಗೇಮ್‌ನ್ನು 21-17ರಿಂದ ಗೆದ್ದುಕೊಂಡ ಸಿಂಧು ತಿರುಗೇಟು ನೀಡಿದರು. ಮೂರನೆ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಸಿಂಧು 21-8 ಅಂತರದ ಗೆಲುವಿನೊಂದಿಗೆ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾರೆ.

ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಚೈನೀಸ್ ತೈಪೆಯ ಚಿಯಾ ಸಿನ್ ಲೀ ಅಥವಾ ಕರೊಲಿನಾ ಮರಿನ್‌ರನ್ನು ಎದುರಿಸಲಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ನರೆಮಿ ಒಕುಹರಾ ವಿರುದ್ಧ 10-21, 21-15, 22-20 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದ ಸಿಂಧು ಎರಡನೆ ಸುತ್ತಿಗೆ ಪ್ರವೇಶಿಸಿದ್ದರು.

 ಇದಕ್ಕೆ ಮೊದಲು ನಡೆದಿದ್ದ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಬಿ.ಸುಮೀತ್ ರೆಡ್ಡಿ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಅಶ್ವಿನಿ-ಸುಮೀತ್ ಜೋಡಿ ಜಾ ಹ್ವಾನ್‌ಕಿಮ್ ಹಾಗೂ ಲೀ ಸೋ ಹೀ ವಿರುದ್ಧ 17-21, 21-17, 21-16 ಅಂತರದಿಂದ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ಕ್ವಿಯಾವೊ ಬಿನ್‌ರನ್ನು 21-15, 21-23, 21-16 ಗೇಮ್‌ಗಳ ಅಂತರದಿಂದ ಮಣಿಸಿದ ಬಿ.ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News