ಗುಜರಾತ್-ಪುಣೆ ಹೋರಾಟ, ಲಯನ್ಸ್‌ಗೆ ಜಡೇಜ ಬಲ
ರಾಜ್‌ಕೋಟ್, ಎ.13: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಗುಜರಾತ್ ಲಯನ್ಸ್ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಎದುರಿಸಲಿದ್ದು, ನಿರ್ಣಾಯಕ ಪಂದ್ಯದಲ್ಲಿ ಸ್ಟಾರ್ ಆಟಗಾರ ರವೀಂದ್ರ ಜಡೇಜ ಲಯನ್ಸ್ ತಂಡದಲ್ಲಿ ಆಡಲಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಜಡೇಜಗೆ ಫಿಸಿಯೋ ಎರಡು ವಾರ ವಿಶ್ರಾಂತಿಗೆ ಸಲಹೆ ನೀಡಿದ್ದರು. ಆಲ್‌ರೌಂಡರ್ ಜಡೇಜ ಆಗಮನದಿಂದ ಗುಜರಾತ್‌ಗೆ ಶಕ್ತಿ ಬಂದಿದೆ. ಈತನಕ ಆಡಿರುವ ಎರಡೂ ಪಂದ್ಯಗಳಲ್ಲಿ ಗುಜರಾತ್ ಸೋತಿದೆ.
ಕೋಲ್ಕತಾ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಸೋತು ಟೂರ್ನಿಯನ್ನು ಆರಂಭಿಸಿದ್ದ ಗುಜರಾತ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 2ನೆ ಪಂದ್ಯವನ್ನೂ ಸೋತಿತ್ತು. ಕಳೆದ ವರ್ಷ ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಪರಿಣಾಮಕಾರಿ ಪ್ರದರ್ಶನ ನೀಡಿತ್ತು. ಪ್ರಸ್ತುತ ಜಡೇಜ ಭರ್ಜರಿ ಫಾರ್ಮ್‌ನಲ್ಲಿದ್ದು, ಜಡೇಜ ಉಪಸ್ಥಿತಿಯು ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ.
ವಿಂಡೀಸ್‌ನ ಆಲ್‌ರೌಂಡರ್ ಡ್ವೆಯ್ನೆ ಬ್ರಾವೊ ಬುಧವಾರ ಅಭ್ಯಾಸ ನಡೆಸಿದ್ದಾರೆ. ಆದರೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬ್ರಾವೊ ಆಡುವ ಬಗ್ಗೆ ಇನ್ನೂ ಅನುಮಾನ ಮುಂದುವರಿದಿದೆ. ಗುಜರಾತ್‌ನ ಬ್ಯಾಟಿಂಗ್ ಸರದಿ ಬಲಿಷ್ಠವಾಗಿದೆ. ಬ್ರೆಂಡನ್ ಮೆಕಲಮ್, ಆ್ಯರೊನ್ ಫಿಂಚ್, ಜೇಸನ್ ರಾಯ್, ಸುರೇಶ್ ರೈನಾ ಹಾಗೂ ದಿನೇಶ್ ಕಾರ್ತಿಕ್ ಅವರಿದ್ದಾರೆ.
ಆದರೆ, ಮೆಕಲಮ್ ಹಾಗೂ ಫಿಂಚ್ ಈವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಕೇವಲ 40 ಹಾಗೂ 18 ರನ್ ಗಳಿಸಿದ್ದಾರೆ. ನಾಯಕ ರೈನಾ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ 68 ರನ್ ಗಳಿಸಿದ್ದರು. ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ(47 ರನ್) ತಂಡವನ್ನು ಆಧರಿಸಿದ್ದರು.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದ್ದ ಪುಣೆ ತಂಡ ಪಂಜಾಬ್ ಹಾಗೂ ಡೆಲ್ಲಿ ವಿರುದ್ಧ ಸತತ ಸೋಲನುಭವಿಸಿ ಹಿನ್ನಡೆ ಅನುಭವಿಸಿದೆ. ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು.
ನಾಯಕ ಸ್ಮಿತ್ ಅಸೌಖ್ಯದಿಂದಾಗಿ ಡೆಲ್ಲಿ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದರು. ಗುಜರಾತ್ ವಿರುದ್ಧ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. 10ನೆ ಐಪಿಎಲ್‌ನ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ ಈತನಕ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಎಂ.ಎಸ್. ಧೋನಿ ಫಾರ್ಮ್ ಕೂಡ ಚಿಂತೆಯ ವಿಷಯವಾಗಿದೆ.
ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು
ಬೆಂಗಳೂರು, ಎ.13: ಮೂರು ಐಪಿಎಲ್ ಪಂದ್ಯಗಳಲ್ಲಿ ಎರಡರಲ್ಲಿ ಸೋತು ಕಂಗಾಲಾಗಿರುವ ಆರ್‌ಸಿಬಿ ತಂಡ ಶುಕ್ರವಾರ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸತತ ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾಗಿರುವ ನಾಯಕ ವಿರಾಟ್ ಕೊಹ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಇದು ಆರ್‌ಸಿಬಿ ಪಾಳಯದಲ್ಲಿ ಸಂಭ್ರಮ ಮೂಡಿಸಿದೆ. ಕೊಹ್ಲಿ ಭುಜನೋವಿನಿಂದಾಗಿ ಆರ್‌ಸಿಬಿ ಈವರ್ಷದ ಐಪಿಎಲ್‌ನಲ್ಲಿ ಆಡಿರುವ ಮೊದಲ 3 ಪಂದ್ಯಗಳಲ್ಲಿ ಆಡಿರಲಿಲ್ಲ. ಆರ್‌ಸಿಬಿ 3 ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸಿದರೆ, ಹಾಲಿ ಚಾಂಪಿಯನ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತಿತ್ತು.
ಪಂಜಾಬ್ ವಿರುದ್ಧ ಪಂದ್ಯದ ವೇಳೆ 46 ಎಸೆತಗಳಲ್ಲಿ 89 ರನ್ ಗಳಿಸಿದ್ದ ಎಬಿಡಿ ವಿಲಿಯರ್ಸ್ ತನ್ನ ಪುನರಾಗಮನವನ್ನು ಸಾರಿದ್ದರು. ಡಿವಿಲಿಯರ್ಸ್ ಏಕಾಂಗಿ ಹೋರಾಟದ ಹೊರತಾಗಿಯೂ ಆ ಪಂದ್ಯದಲ್ಲಿ ಆರ್‌ಸಿಬಿ ಸೋತಿತ್ತು.
ಕೊಹ್ಲಿ ಮುಂಬೈ ವಿರುದ್ಧ ಪಂದ್ಯಕ್ಕೆ ಲಭ್ಯವಿರುವ ವಿಷಯವನ್ನು ಡಿವಿಲಿಯರ್ಸ್ ದೃಢಪಡಿಸಿದ್ದಾರೆ. ಕೊಹ್ಲಿ ಹಾಗೂ ಡಿವಿಲಿಯರ್ಸ್ ನಾಲ್ಕನೆ ಆವೃತ್ತಿಯ ಐಪಿಎಲ್‌ನಿಂದ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದಾರೆ.
ಇಂದಿನ ಪಂದ್ಯಗಳು
ಬೆಂಗಳೂರು-ಮುಂಬೈ
ಸ್ಥಳ: ಬೆಂಗಳೂರು
ಸಮಯ: ಸಂಜೆ 4:00
ಗುಜರಾತ್-ಪುಣೆ
ಸ್ಥಳ: ರಾಜ್‌ಕೋಟ್
ಸಮಯ: ಸಂಜೆ 4:00