ಐಪಿಎಲ್ ಮುಂದಿನ ಆವೃತ್ತಿಗೆ ಚೆನ್ನೈ, ರಾಜಸ್ಥಾನ
ಮುಂಬೈ, ಎ.14: ಐಪಿಎಲ್‌ನ ಹನ್ನೊಂದನೆ ಆವೃತ್ತಿಯ ಟ್ವೆಂಟಿ-20 ಟೂರ್ನಮೆಂಟ್‌ಗೆ ಅಮಾನತುಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ವಾಪಸಾಗಲು ತಯಾರಿ ಆರಂಭಿಸಿದೆ.
ಚೆನ್ನೈ ತಂಡ ಮತ್ತೆ ಐಪಿಎಲ್ ಟೂರ್ನಿಗೆ ಹಿಂದಿರುಗಲು ಭರ್ಜರಿ ತಯಾರಿ ಆರಂಭಿಸಿದ್ದರೆ, ರಾಜಸ್ಥಾನ ಹೊಸ ಹೂಡಿಕೆದಾರರಿಗಾಗಿ ಎದುರು ನೋಡುತ್ತಿದೆ.
ಎರಡು ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ 2013ರ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಆದೇಶದಂತೆ 2016 ಮತ್ತು 2017ನೆ ಐಪಿಎಲ್ ಆವೃತ್ತಿಯ ಟೂರ್ನಮೆಂಟ್‌ನಿಂದ ಹೊರದಬ್ಬಲ್ಪಟ್ಟಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನಿಂದ ಅಮಾನತುಗೊಂಡ ಹಿನ್ನೆಲೆಯಲ್ಲಿ ಚೆನ್ನೈ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಅವರು ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಕಳೆದ ಆವೃತ್ತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಆದರೆ ತಂಡದ ಮಾಲಕರು ಈ ಬಾರಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅವರನ್ನು ನಾಯಕರಾಗಿ ನೇಮಕ ಮಾಡಿದ್ದರು. ಧೋನಿ ಆರ್‌ಪಿಎಸ್ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ಧಾರೆ. ಈ ಆವೃತ್ತಿ ಮುಗಿದ ಬೆನ್ನೆಲ್ಲೇ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ವಾಪಸಾಗಲಿದ್ದಾರೆ ಎಂದು ತಿಳದು ಬಂದಿದೆ.