ಅಂಡರ್-15 ಪದಕ ಜಯಿಸಿದ ಗಾಯತ್ರಿ , ಸಮಿಯಾ ಪಿ.ಗೋಪಿಚಂದ್ ಪುತ್ರಿ ಚಾಂಪಿಯನ್

Update: 2017-04-16 13:17 GMT

ಹೊಸದಿಲ್ಲಿ, ಎ.16: ಭಾರತದ ಬ್ಯಾಡ್ಮಿಂಟನ್ ಜಗತ್ತಿಗೆ ಎ.16 ರವಿವಾರವನ್ನು ಸೂಪರ್ ಸಂಡೇ ಎಂದೇ ಹೇಳಬಹುದು. ಯಾಕೆಂದರೆ ಹೈದರಾಬಾದ್‌ನ ಪಿ. ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮೂವರು ಆಟಗಾರರು ಅಪೂರ್ವ ಸಾಧನೆ ಮಾಡಿ ಭಾರತದ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಸಿಂಗಾಪುರ ಓಪನ್ ಸೂಪರ್ ಸೀರಿಸ್‌ನಲ್ಲಿ ಇಬ್ಬರು ಆಟಗಾರರು ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಮೊದಲ ಎರಡು ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಬಿ. ಸಾಯಿಪ್ರಣೀತ್ ಅವರು ಇಂದು ನಡೆದ ಫೈನಲ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ರನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಶ್ರೀಕಾಂತ್ ರನ್ನರ್ಸ್‌ ಆಫ್ ಸ್ಥಾನಕ್ಕೆ ತೃಪ್ತಿಪಟ್ಟರು.

ಇದೇ ವೇಳೆ ಜಕಾರ್ತದಲ್ಲಿ ನಡೆದ ಅಂಡರ್-15 ವಿಭಾಗದ ಬಾಲಕಿಯರ ಸಿಂಗಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಚಾಂಪಿಯನ್ ಎನಿಸಿಕೊಂಡರು. ಗಾಯತ್ರಿ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಅವರ ಕೋಚ್ ಗೋಪಿ ಚಂದ್ ಸುಪುತ್ರಿ ಎನ್ನುವುದು ಇಲ್ಲಿ ವಿಶೇಷ.

ಗಾಯತ್ರಿ ಗೋಪಿಚಂದ್ ಅವರು ಸಮಿಯಾ ಇಮಾದ್ ಫಾರೂಕಿ ಅವರನ್ನು 21-11, 18-21, 21-16 ಅಂತರದಲ್ಲಿ ಸೋಲಿಸಿ ಅಂಡರ್-15 ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಪಡೆದರು. ಕವಿಪ್ರಿಯಾ ಸೆಲ್ವಂ ಕಂಚು ತನ್ನದಾಗಿಸಿಕೊಂಡರು.ಕವಿಪ್ರಿಯಾ ಸೆಲ್ವಂರನ್ನು ಸೆಮಿಫೈನಲ್‌ನಲ್ಲಿ 15-21, 21-13, 21-16 ಅಂತರದಲ್ಲಿ ಮಣಿಸಿದ ಸಮಿಯಾ ಫೈನಲ್‌ಗೆ ಅವಕಾಶ ಪಡೆದಿದ್ದರು. ಇದರೊಂದಿಗೆ ಅಂಡರ್-15 ವಿಭಾಗದ ಮೂರು ಪದಕಗಳನ್ನು ಭಾರತ ಗೆದ್ದುಕೊಂಡಿತು.

ಅಂಡರ್-15 ವಿಭಾಗದ ಬಾಲಕಿಯರ ಡಬಲ್ಸ್‌ನಲ್ಲಿ ಗಾಯತ್ರಿ ಮತ್ತು ಸಮಿಯಾ ಅವರು ಇಂಡೋನೆಷ್ಯಾದ ಕೆಲೈ ಲಾರಿಸಾ ಮತ್ತು ಶೆಲಾಂಡ್ರಿ ವ್ಯೊಲಾ ಅವರನ್ನು 21-17, 21-15 ಅಂತರದಿಂದ ಬಗ್ಗು ಬಡಿದು ಡಬಲ್ಸ್ ಚಿನ್ನ ಬಾಚಿಕೊಂಡರು.

ಶನಿವಾರ ಡಬಲ್ಸ್ ಸೆಮಿಫೈನಲ್‌ನಲ್ಲಿ ಮೇಘನಾ ರೆಡ್ಡಿ ಮಾರೆಡ್ಡಿ ಮತ್ತು ಕವಿಪ್ರಿಯಾ ಅವರು ಇಂಡೋನೆಷ್ಯಾದ ಕೆಲೈ ಲಾರಿಸಾ ಮತ್ತು ಶೆಲಾಂಡ್ರಿ ವ್ಯೊಲಾ ವಿರುದ್ಧ 21-16, 21-18 ಅಂತರದಲ್ಲಿ ಸೋತು ಫೈನಲ್ ತಲುಪುವಲ್ಲಿ ಎಡವಿದ್ದರು. ಆದರೆ ಅವರಿಗೆ ಮೂರನೆ ಸ್ಥಾನದೊಂದಿಗೆ ಕಂಚು ದೊರೆಯಿತು.

ಗಾಯತ್ರಿ ಗೋಪಿಚಂದ್, ಸಮಿಯಾ, ಮೇಘನಾ ಮತ್ತು ಕವಿಪ್ರಿಯಾ ಅವರು ಹೈದರಾಬಾದ್‌ನ ಪಿ.ಗೋಪಿಚಂದ್ ಅಕಾಡೆಮಿಯ ಆಟಗಾರ್ತಿಯರು. ಮೊದಲ ಬಾರಿ ಜೂನಿಯರ್ ಗ್ರಾನ್ ಪ್ರಿ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಿ ಅಪೂರ್ವ ಯಶಸ್ಸು ಗಳಿಸಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News