ಹಿಮಾಂತ ವಿಶ್ವ ಬಾಯ್ ಅಧ್ಯಕ್ಷ ?
ಹೊಸದಿಲ್ಲಿ, ಎ.17: ಅಸ್ಸಾಂನ ಆರೋಗ್ಯ ಸಚಿವ ಮತ್ತು ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಹಿಮಾಂತ ವಿಶ್ವ ಶರ್ಮ ಅವರು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ(ಬಾಯ್) ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಕಂಡು ಬಂದಿದೆ. ಸಚಿವ ಶರ್ಮ ಅವರು ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪ್ರಭಾವಿ ಬಿಜೆಪಿ ನಾಯಕಾರಗಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಅವರ ನಿಧನದಿಂದ ಬಾಯ್ ಅಧ್ಯಕ್ಷ ಸ್ಥಾನದ ಮೇಲೆ ಶರ್ಮ ಕಣ್ಣಿಟ್ಟಿದ್ದಾರೆ.
ಶರ್ಮ ಭಾರತದ ಬ್ಯಾಡ್ಮಿಂಟನ್ ಸಂಘಟನೆಯ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ವಿಚಾರವನ್ನು ತಿಳಿದು ಅವರಿಗೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಜ್ವಾಲಾ ಗುಟ್ಟಾ, ಅಶ್ವಿನ್ ಪೊನ್ನಪ್ಪ ಮತ್ತು ಪಿ.ಕಶ್ಯಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಕಾರ್ಯಕಾರಿ ಸಮಿತಿಯ ಸಭೆಯು ಶೀಘ್ರದಲ್ಲೇ ನಡೆಯಲಿದ್ದು, ಈ ಸಭೆಯಲ್ಲಿ ಶರ್ಮ ಬಾಯ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಆದರೆ ಶರ್ಮ ಕಾರ್ಯಕಾರಿ ಸಮಿತಿ ಸದಸ್ಯರಲ್ಲ. ಕಾರ್ಯಕಾರಿ ಸಮಿತಿ ಸದಸ್ಯರಾಗದವರಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅವಕಾಶ ಇಲ್ಲ. ಈ ಕಾರಣದಿಂದಾಗಿ ಮೊದಲು ಶರ್ಮರನ್ನು ಕಾರ್ಯಕಾರಿ ಸಮಿತಿಗೆ ಸೇರಿಸಿಕೊಂಡು ಬಳಿಕ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಗುಪ್ತಾ ಅವರ ನಿಧನದಿಂದ ಖಾಲಿಯಾಗಿರುವ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಶರ್ಮರನ್ನು ನೇಮಕ ಮಾಡಲಾಗುವುದು. ಬಳಿಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ(ಬಾಯ್) ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.