×
Ad

ಟ್ವೆಂಟಿ-20 ಯಲ್ಲಿ ಗೇಲ್ 10 ಸಾವಿರ ರನ್ ದಾಖಲೆ

Update: 2017-04-18 21:45 IST

ರಾಜ್‌ಕೋಟ್ , ಎ.18: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ದಾಂಡಿಗನಾಗಿ ದಾಖಲೆ ಬರೆದಿದ್ದಾರೆ.

 ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಇಂದು ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 20ನೆ ಪಂದ್ಯದ ನಾಲ್ಕನೆ ಓವರ್‌ನ ಮೂರನೆ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಗೇಲ್ 10,000 ರನ್ ಪೂರ್ಣಗೊಳಿಸಿದರು.

ಗೇಲ್ ಇಂದಿನ ಪಂದ್ಯದಲ್ಲಿ 77 ರನ್ ಗಳಿಸಿ ಔಟಾದರು. ಇದರೊಂದಿಗೆ ಅವರ ರನ್ ದಾಖಲೆ 10,074ಕ್ಕೆ ಏರಿದೆ.

 37ರ ಹರೆಯದ ಗೇಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದವರು. 18 ಶತಕ ಮತ್ತು 61 ಅರ್ಧಶತಕ ದಾಖಲಿಸಿರುವ ಗೇಲ್ ಐಪಿಎಲ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 175) ಗಳಿಸಿದ ದಾಂಡಿಗ. 12 ಎಸೆತಗಳಲ್ಲಿ ವೇಗದ ಅರ್ಧಶತಕ. ಗರಿಷ್ಠ ಸಿಕ್ಸರ್ (743) ಮತ್ತು ಗರಿಷ್ಠ ಬೌಂಡರಿ (769) ದಾಖಲಿಸಿದ ವಿಶ್ವದ ಮೊದಲ ಆಟಗಾರ.

 ಪ್ರಸ್ತುತ ವರ್ಷಐಪಿಎಲ್‌ಗೂ ಮೊದಲು ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ತಂಡದ ಪರ ಆಡಿದ್ದ ಗೇಲ್ 9 ಪಂದ್ಯಗಳಲ್ಲಿ 160 ರನ್ ಜಮೆ ಮಾಡಿದ್ದರು.
 ಈ ಬಾರಿ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 21 ಎಸೆತಗಳಲ್ಲಿ 32 ರನ್, ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 8 ಎಸೆತಗಳಲ್ಲಿ 6 ರನ್, ಮುಂಬೈ ಇಂಡಿಯನ್ಸ್ ವಿರುದ್ಧ 22 ರನ್ ದಾಖಲಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರನ್ ಸಂಖ್ಯೆಯನ್ನು 9,997ಕ್ಕೆ ಏರಿಸಿದ್ದರು. ಇಂದು 290ನೆ ಪಂದ್ಯದಲ್ಲಿ 10,000 ರನ್‌ಗಳ ಮೈಲುಗಲ್ಲನ್ನು ದಾಟಿರುವ ಗೇಲ್ 10ಕೆ ಕ್ಲಬ್ ಪ್ರವೇಶಿಸಿರುವ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಗೇಲ್ ಅವರು ಗುಜರಾತ್ ಲಯನ್ಸ್ ವಿರುದ್ಧ ನಾಯಕ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 122 ರನ್‌ಗಳ ಜೊತೆಯಾಟ ನೀಡಿದರು. ಗೇಲ್ 77 ರನ್ (38ಎ,5ಬೌ,7ಸಿ) ಗಳಿಸಿ ಔಟಾದರು.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್

  ►►ಆಟಗಾರ ರನ್

  1. ಕ್ರಿಸ್ ಗೇಲ್10,074

  2. ಬ್ರೆಂಡನ್ ಮೆಕಲಮ್7,524

  3. ಬ್ರಾಡ್ ಹಾಡ್ಜ್7,338

  4. ಡೇವಿಡ್ ವಾರ್ನರ್7,156

  5. ಕೀರನ್ ಪೊಲಾರ್ಡ್7,087

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News