ಫ್ರೆಂಚ್ ಓಪನ್: ಕ್ವಿಟೋವಾ ತಯಾರಿ
ಪ್ಯಾರಿಸ್, ಎ.18: ದುಷ್ಕರ್ಮಿಯ ಚೂರಿ ಇರಿತಕ್ಕೆ ಒಳಗಾಗಿ ಬಲಗೈಗೆ ಗಂಭೀರ ಗಾಯಮಾಡಿಕೊಂಡಿದ್ದ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮುಂಬರುವ ಪ್ರತಿಷ್ಠಿತ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕ್ವಿಟೋವಾ ಅವರ ತವರು ಪಟ್ಟಣ ಪ್ರೊಸ್ಟೆಜೊವ್‌ನಲ್ಲಿರುವ ನಿವಾಸದೊಳಗೆ ನುಸುಳಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ದಾಳಿ ಮಾಡಲು ಯತ್ನಿಸಿದ್ದ. ಆ ವ್ಯಕ್ತಿಯೊಂದಿಗೆ ಹೋರಾಡಿದ ಕ್ವಿಟೋವಾರ ಬಲಗೈಗೆ ಗಾಯವಾಗಿತ್ತು. ಝೆಕ್‌ನ ಸ್ಟಾರ್ ಆಟಗಾರ ಕ್ವಿಟೋವಾ ಸಕ್ರಿಯ ಟೆನಿಸ್‌ಗೆ ವಾಪಸಾಗಲು ಸಾಕಷ್ಟು ಸಮಯ ಬೇಕೆಂದು ವೈದ್ಯರು ಅಂದಾಜಿಸಿದ್ದರು.
ನಾಳೆ ಫ್ರೆಂಚ್ ಓಪನ್‌ನ ಪ್ರವೇಶಪಟ್ಟಿಯಲ್ಲಿ ನನ್ನ ಹೆಸರು ಮೊದಲ ಸಾಲಿನಲ್ಲಿರಲಿದೆ. ಟೂರ್ನಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನಾನು ಕೂಡ ಬೇಗನೆ ಚೇತರಿಸಿಕೊಳ್ಳುತ್ತಿರುವೆ. ನನ್ನ ನೆಚ್ಚಿನ ಟೂರ್ನಿಯಲ್ಲಿ ಆಡಲು ಎಲ್ಲ ಅವಕಾಶವನ್ನು ಬಳಸಿಕೊಳ್ಳುವೆ ಎಂದು ಕ್ವಿಟೋವಾ ಹೇಳಿದ್ದಾರೆ.