ಆರ್‌ಸಿಬಿಗೆ 21 ರನ್‌ಗಳ ಜಯ
ರಾಜ್‌ಕೋಟ್, ಎ.18: ಐಪಿಎಲ್ ಟ್ವೆಂಟಿ-20 ಟೂರ್ನಿಯ 20ನೆ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ರಾಯಲ್‌ಚಾಲೆಂಜರ್ಸ್ ಬೆಂಗಳೂರು ತಂಡ 21 ರನ್‌ಗಳ ರೋಚಕ ಜಯ ಗಳಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 214 ರನ್‌ಗಳ ಸವಾಲನ್ನು ಪಡೆದ ಗುಜರಾತ್ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 192 ರನ್ ಗಳಿಸಿತು.
ಗುಜರಾತ್ ತಂಡ ಚಾಹಲ್ (31ಕ್ಕೆ 3), ಪವನ್ ನೇಗಿ(21ಕ್ಕೆ 1) ಎಸ್.ಅರವಿಂದ್(32ಕ್ಕೆ 1) , ಮಿಲ್ನೆ(43ಕ್ಕೆ 1) ದಾಳಿಗೆ ಸಿಲುಕಿದರೂ, ಗೆಲುವಿಗಾಗಿ ವಿರೋಚಿತ ಹೋರಾಟ ನಡೆಸಿತು.
ಆರಂಭಿಕ ದಾಂಡಿಗ ಡೇಯ್ನ ಸ್ಮಿತ್(1) ಮತ್ತು ನಾಯಕ ಸುರೇಶ್ ರೈನಾ(23) ಅವರನ್ನು ಬೇಗನೆ ಕಳೆದುಕೊಂಡಿತು. ಬಳಿಕ ಬ್ರೆಂಡನ್ ಮೆಕಲಮ್ 72 ರನ್(38ಎ, 5ಬೌ,7ಸಿ) ಗಳಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆ್ಯರೊನ್ ಫಿಂಚ್(19), ರವೀಂದ್ರ ಜಡೇಜ(23), ಇಶಾನ್ ಕಿಶನ್(39) ಎರಡಂಕೆಯ ಸ್ಕೋರ್ ದಾಖಲಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 213 ರನ್ ಗಳಿಸಿತ್ತು.
ಆರಂಭಿಕ ದಾಂಡಿಗರಾದ ಕ್ರಿಸ್ ಗೇಲ್ 77 ರನ್(44ಎ, 2ಬೌ,7ಸಿ) ಮತ್ತು ವಿರಾಟ್ ಕೊಹ್ಲಿ 64 ರನ್(50ಎ,7ಬೌ,1ಸಿ) , ಟ್ರಾವಿಸ್ ಹೆಡ್ ಔಟಾಗದೆ 30ರನ್ ಮತ್ತು ವಿಕೆಟ್ ಕೀಪರ್ ಕೇದಾರ್ ಜಾಧವ್ ಔಟಾಗದೆ 38ರನ್ ಗಳಿಸಿದರು.
ಗೇಲ್ ಮತ್ತು ಕೊಹ್ಲಿ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 122 ರನ್‌ಗಳ ಕೊಡುಗೆ ನೀಡಿದರು.
ಗೇಲ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಅರ್ಧಶತಕ ಪೂರೈಸಿದರು. ಕೊಹ್ಲಿ 43 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.
ಧವಳ್ ಕುಲಕರ್ಣಿ ಮತ್ತು ಬಾಸಿಲ್ ಥಾಂಪಿ ತಲಾ 1 ವಿಕೆಟ್ ಪಡೆದರು.