ಹರಾಜಿಗಿದೆ ಕ್ರಿಸ್ ಗೇಲ್ ಬ್ಯಾಟ್
ಬೆಂಗಳೂರು, ಎ.19: ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಕ್ರಿಸ್ ಗೇಲ್ ಬ್ಯಾಟ್ ಹರಾಜಿಗೆ ಸಿದ್ಧವಾಗಿದೆ.
ಜೂ.6 ರಂದು ವೆಸ್ಟ್‌ಇಂಡೀಸ್‌ನ ಜಮೈಕಾದಲ್ಲಿ ಕ್ರಿಸ್ ಗೇಲ್ ಫೌಂಡೇಶನ್ ಗೇಲ್ ಬ್ಯಾಟ್‌ನ್ನು ಹರಾಜಿಗೆ ಇಡಲಿದೆ.
ಗುಜರಾತ್ ಲಯನ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ 38 ಎಸೆತಗಳಲ್ಲಿ 77 ರನ್ ಗಳಿಸಿದ್ದ ಗೇಲ್ ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಎರಡನೆ ಗೆಲುವು ಸಾಧಿಸಲು ನೆರವಾಗಿದ್ದರು. ಈ ವರ್ಷದ ಐಪಿಎಲ್‌ನಲ್ಲಿ ಗೇಲ್ ಮೊದಲ ಅರ್ಧಶತಕ ಪೂರೈಸಿದರು.
ಗೇಲ್‌ಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10,000 ರನ್ ಮೈಲುಗಲ್ಲು ತಲುಪಲು ಕೇವಲ 3 ರನ್ ಅಗತ್ಯವಿತ್ತು. ಗುಜರಾತ್ ವಿರುದ್ಧ ಪಂದ್ಯದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದ್ದ ಗೇಲ್ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿದ್ದರು. ಜೊತೆಗೆ 10,000 ರನ್ ಪೂರೈಸಿದರು. ಜಡೇಜ ಓವರ್‌ವೊಂದರಲ್ಲಿ ತಲಾ 2 ಬೌಂಡರಿ, ಸಿಕ್ಸರ್ ಬಾರಿಸಿದ ಗೇಲ್ ಅವರು ಶಿವಿಲ್ ಕೌಶಿಕ್ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಮೂಲಕ ತನ್ನದೇ ಶೈಲಿಯಲ್ಲಿ ಅರ್ಧಶತಕ ಪೂರೈಸಿದ್ದರು.
ಗೇಲ್ ಇನಿಂಗ್ಸ್ ಕುರಿತು ಪ್ರತಿಯೊಬ್ಬರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿಯ ಸಹ ಆಟಗಾರರು ನಕಲಿ ಕರೆನ್ಸಿ ನೋಟುಗಳ ಚಿತ್ರದ ಮೂಲಕ ಗೇಲ್‌ಗೆ ಶುಭಾಶಯ ಕೋರಿದರು.
ಗೇಲ್ ಸಂದರ್ಶನ ಮಾಡಿದ ಕೊಹ್ಲಿ
ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ ತಂಡ 21 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಪಂದ್ಯ ಕೊನೆಗೊಂಡ ಬಳಿಕ ಪರಸ್ಪರ ಅನುಭವ ಹಂಚಿಕೊಂಡರು. ಕೊಹ್ಲಿ ಅವರು ಗೇಲ್‌ರನ್ನು ಸಂದರ್ಶನ ಮಾಡುವ ಮೂಲಕ ಅವರ ಅನುಭವ ಹೊರಹಾಕಿದರು.
ಐಪಿಎಲ್ ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಕೊಹ್ಲಿ ಅವರು ವಿಂಡೀಸ್ ಆಲ್‌ರೌಂಡರ್ ಗೇಲ್‌ರನ್ನು ಸಂದರ್ಶಿಸಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ.
ತನ್ನೊಂದಿಗೆ ಇನಿಂಗ್ಸ್ ಆರಂಭಿಸಿದಾಗ ನಿಮಗಾದ ಅನುಭವವೇನು ಎಂದು ಕೊಹ್ಲಿ ಮೊದಲ ಪ್ರಶ್ನೆ ಕೇಳಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಗೇಲ್,‘‘ನಿಮ್ಮೆಂದಿಗೆ ಇನಿಂಗ್ಸ್ ಆರಂಭಿಸಿದ ಶ್ರೇಷ್ಠ ಅನುಭವ. ನೀವು ಲೆಜಂಡ್ ಇದ್ದಂತೆ. ನಿಮಗೆ ಇನ್ನಷ್ಟು ರನ್ ಗಳಿಸಲು ಅವಕಾಶವಿದೆ. ಮತ್ತೊಂದು ತುದಿಯಲ್ಲಿ ನಿಮ್ಮ ಬ್ಯಾಟಿಂಗ್ ನೋಡುವ ಖುಷಿಯೇ ಬೇರೆ. ವೃತ್ತಿಬದುಕಿನಲ್ಲಿ ನೀವು ಈತನಕ ಚೆನ್ನಾಗಿ ಆಡಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನಷ್ಟು ರನ್ ಗಳಿಸಿ ಎಂದು ಹಾರೈಸುವೆ ಎಂದರು.
ನಿಮ್ಮಂದಿಗೆ ಇನಿಂಗ್ಸ್ ಆರಂಭಿಸಿದ್ದು ನನ್ನ ಭಾಗ್ಯ. ನಾವಿಬ್ಬರು 10ನೆ ಬಾರಿ ಶತಕದ ಜೊತೆಯಾಟ ನಡೆಸಿದ್ದೇವೆ. ನೀವು 10,000 ರನ್ ಪೂರೈಸಿದ್ದೀರಿ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೊಹ್ಲಿ ಪ್ರಶ್ನಿಸಿದರು.
‘‘ಇದೊಂದು ಅದ್ಭುತ ಹಾಗೂ ಸ್ಮರಣೀಯ ಕ್ಷಣ. ಹಲವು ಬಾರಿ ಶತಕದ ಜೊತೆಯಾಟ ನಡೆಸಿದ್ದು ನಿಜಕ್ಕೂ ಶ್ರೇಷ್ಠ. ವೈಯಕ್ತಿಕ ದೃಷ್ಟಿಯಿಂದ ಆರ್‌ಸಿಬಿ ಫ್ರಾಂಚೈಸಿ ಪರ ಆಡಿರುವುದು ನನಗೆ ನೆರವಾಯಿತು. ನಮ್ಮ ತಂಡದಲ್ಲಿ ಪ್ರತಿಭಾವಂತರಿದ್ದಾರೆ’’ ಎಂದು ಗೇಲ್ ಉತ್ತರಿಸಿದರು.