×
Ad

ಧೋನಿ ವಿರುದ್ಧ ಕ್ರಿಮಿನಲ್ ಕೇಸ್ ರದ್ದುಪಡಿಸಿದ ಸುಪ್ರೀಂಕೋರ್ಟ್

Update: 2017-04-20 17:20 IST

ಹೊಸದಿಲ್ಲಿ, ಎ.20: ಬ್ಯುಸಿನೆಸ್ ಮ್ಯಾಗಝಿನ್‌ವೊಂದರಲ್ಲಿ ಭಗವಾನ್ ವಿಷ್ಣು ವೇಶಧಾರಿಯಾಗಿ ಕಾಣಿಸಿಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿದೆ.
 
ಧೋನಿ ಅವರು ಭಗವಾನ್ ವಿಷ್ಣು ಅವತಾರದಲ್ಲಿ ಮ್ಯಾಗಝಿನ್‌ವೊಂದ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ತಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಕ್ರಿಮಿನಲ್ ದೂರನ್ನು ರದ್ದುಪಡಿಸಿದೆ.

ಧೋನಿ 2013ರ ಎಪ್ರಿಲ್‌ನಲ್ಲಿ ಬಿಡುಗಡೆಯಾದ ನಿಯತಕಾಲಿಕೆಯೊಂದರ ಸಂಚಿಕೆಯಲ್ಲಿ ವಿಷ್ಣುವಿನ ವೇಷಧಾರಿಯಾಗಿ ರಿಬಾಕ್ ಕಂಪೆನಿಯ ಶೂ ಸಹಿತ ಹಲವು ವಸ್ತುಗಳನ್ನು ಕೈಯಲ್ಲಿ ಹಿಡಿದು ಜಾಹೀರಾತು ನೀಡಿದ್ದರು. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಎನ್ನುವವರು ಬೆಂಗಳೂರಿನಲ್ಲಿ ಖಾಸಗಿ ದೂರು ದಾಖಲಿಸಿದ್ದರು.
 ಆಂಧ್ರಪ್ರದೇಶದ ಅನಂತಪುರ ನ್ಯಾಯಾಲಯವೊಂದು ಧೋನಿ ವಿರುದ್ಧ ಜಾಮೀನು-ರಹಿತ ವಾರಂಟ್‌ನ್ನು ಜಾರಿಗೊಳಿಸಿತ್ತು.
 ಹಿರೇಮಠ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಧೋನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸಿತ್ತು. ತನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸುವಂತೆ ಕೋರಿ ಧೋನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು.
 ಹೈಕೋರ್ಟ್ ಆದೇಶದ ವಿರುದ್ಧ ಹಾಗೂ ತನ್ನ ವಿರುದ್ಧದ ಕ್ರಿಮಿನಲ್ ಕೇಸ್‌ನ್ನು ರದ್ದುಪಡಿಸಬೇಕೆಂದು ಕೋರಿ ಧೋನಿ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ಇಂದು ನೀಡಿರುವ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಧೋನಿ ನಿಟ್ಟುಸಿರುಬಿಟ್ಟಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News